ಮನೋರಂಜನೆ

ವಿಕ್ಕಿ, ರಶ್ಮಿಕಾ ನಟನೆಯ ‘ಛಾವಾ’ ಒಟಿಟಿಗೆ ಎಂಟ್ರಿ: ಮನೆಯಲ್ಲೇ ಕುಳಿತು ನೋಡಿ ಛತ್ರಪತಿ ಸಂಭಾಜಿ ಮಹಾರಾಜರ ಕಥೆ 

Published

on

ಬಾಲಿವುಡ್ ಸೂಪರ್​ ಸ್ಟಾರ್ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಬ್ಲಾಕ್​ಬಸ್ಟರ್​​ ಚಿತ್ರ ‘ಛಾವಾ’ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್​​ ಕಟ್​ ಹೇಳಿರೋ ಸಿನಿಮಾ ಮೊದಲು ಹಿಂದಿಯಲ್ಲಿ ತೆರೆಕಂಡು, ನಂತರ ತೆಲುಗಿನಲ್ಲಿಯೂ ಬಿಡುಗಡೆ ಆಗಿ ಯಶಸ್ಸು ಕಂಡಿದೆ. ಸಿನಿಮಾ ಹಾಲ್​ಗಳಲ್ಲಿ ಸಂಚಲನ ಸೃಷ್ಟಿಸಿದ ಚಿತ್ರವೀಗ ಒಟಿಟಿಗೂ ಎಂಟ್ರಿ ಕೊಟ್ಟಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದವರು ಇದೀಗ ತಾವಿದ್ದ ಸ್ಥಳದಲ್ಲೇ ಮೊಬೈಲ್​ ಆ್ಯಪ್​ ಮೂಲಕ ನೋಡಬಹುದಾಗಿದೆ.

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್, ಬ್ಲಾಕ್​ಬಸ್ಟರ್​ ಛಾವಾ ಡಿಜಿಟಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಚಿತ್ರವು ಏಪ್ರಿಲ್ 11 ಅಂದರೆ ಇಂದಿನಿಂದ ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಗುರುವಾರದಂದು, ನೆಟ್‌ಫ್ಲಿಕ್ಸ್ ತನ್ನ ಅಫೀಶಿಯಲ್​​ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಿತ್ತು. “ಛಾವಾ ಏಪ್ರಿಲ್ 11ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ” ಎಂದು ಪೋಸ್ಟ್‌ ಮಾಹಿತಿ ಒದಗಿಸಿತ್ತು.

ಫೆಬ್ರವರಿ 14ರಂದು ಬಿಡುಗಡೆಯಾದ ಈ ಚಿತ್ರ ವಿಶ್ವಾದ್ಯಂತ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​​ ಮಾಡಿದೆ. ಬಾಲಿವುಡ್​ ಬಹುಬೇಡಿಕೆ ನಟ ವಿಕ್ಕಿ ಕೌಶಲ್ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ಸೃಷ್ಟಿಸಿದೆ. ಸೂಪರ್​ ಹಿಟ್​ ಸಿನಿಮಾಗಳನ್ನೇ ಕೊಡುತ್ತಿದ್ದ ನ್ಯಾಷನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರಿಗೆ ಚಿತ್ರ ಮತ್ತೊಂದು ದೊಡ್ಡ ಯಶಸ್ಸು ತಂದುಕೊಟ್ಟಿತು.

ಆರಂಭದಲ್ಲಿ ಕೇವಲ ಹಿಂದಿಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ತೆಲುಗು ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಹಿನ್ನೆಲೆ, ಚಿತ್ರದ ತೆಲುಗು ಆವೃತ್ತಿ ಮಾರ್ಚ್ 7ರಂದು ಬಿಡುಗಡೆ ಆಯಿತು. ಚಿತ್ರಕ್ಕೆ ತೆಲುಗಿನಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇದು ಡಬ್ಬಿಂಗ್ ಚಿತ್ರವಾಗಿದ್ದರೂ, ಕಲೆಕ್ಷನ್ ಉತ್ತಮವಾಗಿತ್ತು. ತೆಲುಗಿನಲ್ಲಿ ಛಾವಾ ಸರಿಸುಮಾರು 20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

‘ಛಾವಾ’, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ವಿಕ್ಕಿ ಅವರ ಅದ್ಭುತ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸಂಭಾಜಿ ಕಥೆಯಲ್ಲಿ ಅಕ್ಷಯ್ ಖನ್ನಾ ಔರಂಗಜೇಬನ ಪಾತ್ರವನ್ನು ನಿರ್ವಹಿಸಿದ್ದಾರೆ. ಒಟ್ಟಾರೆ, ಎಲ್ಲರೂ ತಮ್ಮ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ಸ್ವೀಕರಿಸಿದರು. ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version