ಜೂಮ್ ಪ್ಲಸ್

ಕಲಾವಿದನ ಕುಟುಂಬಕ್ಕೆ ಆಸರೆಯಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟ

Published

on

ಮಂಗಳೂರು,ಫೆ.19 (Zoom Karnataka): ಕಲಾಸಂಗಮ, ಮಂಗಳಾ ಕಲಾವಿದೆರ್ ಸಹಿತ ಬೇರೆ ಬೇರೆ ನಾಟಕ ತಂಡಗಳಲ್ಲಿ ಅಭಿನಯಿಸುವ ಮೂಲಕ‌ ಒರಿಯರ್ದೊರಿ ಅಸಲ್ ನಾಟಕ ಸಿನಿಮಾದ ತಾರಾಯಿದೆಪ್ಪುನ ನಾಥನ್ನ ಖ್ಯಾತಿಯ ಅಶೋಕ್ ಅಂಬ್ಲಮೊಗರು ಕಳೆದ ಕೆಲವು ತಿಂಗಳ ಹಿಂದೆ ನಿಧನರಾಗಿದ್ದು, ಅವರ ಕುಟುಂಬ ಕಡುಬಡತನದಲ್ಲಿ ಜೀವನ ನಡೆಸಿರುವುದನ್ನು ಮನಗಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದಿಂದ ಆರ್ಥಿಕ‌ ನೆರವು ನೀಡಿದ್ದಾರೆ.

ಅಶೋಕ್ ಶೆಟ್ಟಿ ಅಂಬ್ಲಮೊಗರು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದಲ್ಲಿದ್ದರು. ಬಳಿಕ ತನ್ನದೇ ಆದ ಮಂಗಳ ಕಲಾವಿದೆರ್ ನಾಟಕ ತಂಡವನ್ನು ಕಟ್ಟಿ ಕಟ್ಟೆದ ಗುಳಿಗೆ ನಾಟಕವನ್ನು ರಚಿಸಿ ನಾಟಕ ಪ್ರದರ್ಶಿಸಿದ್ದರು. ಆರಂಭದ ದಿನಗಳಲ್ಲಿ ಸುಧೀರ್ ರಾಜ್ ಉರ್ವಾ ಅವರ ನಾಟಕ ತಂಡದಲ್ಲಿ ಕಾಣಿಸಿಕೊಂಡಿದ್ದರು.
ನಾಟಕದ ಜೊತೆಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವರು ಸಾಯುವ ಮುನ್ನ ವಿಜಯ ರಾಘವೇಂದ್ರ ಜೊತೆ ಪ್ರಮುಖ ಪಾತ್ರವೊಂದರಲ್ಲಿ ಇಪ್ಪತ್ತು ದಿನಗಳ ಕಾಲ ಶೂಟಿಂಗ್ ನಲ್ಲಿದ್ದರು. ಕೆಲವು ದಿನಗಳ ಬಳಿಕ ಹೃದಯಾಘಾತಕ್ಕೊಳಗಾಗಿ ಮೃತ ಪಟ್ಟಿದ್ದರು. ಅನೇಕ ನಾಟಕ ಯಕ್ಷಗಾನ ಪ್ರಸಂಗ ರಚಿಸಿದ್ದರು. ಅವರೇ ರಚಿಸಿದ ಮಸಣದ ಪೂ, ಕಾಲಚಕ್ರ ನಾಟಕದಂತೆ ಅವರ ಬದುಕು ಕೂಡಾ ಕಾಲಚಕ್ರದಲ್ಲಿ ಮಸಣದ ಹೂವಾಗಿ ಹುದುಗಿಹೋಯಿತು.
ಅಶೋಕ್ ಶೆಟ್ಟಿ ಅಂಬ್ಲಮೊಗರು ಅವರಿಗೆ ಇಬ್ಬರು ಮಕ್ಕಳು.‌ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ತೀರಾ ಬಡತನದಲ್ಲಿದ್ದು ದುಡಿಯುವ ಕೈಗಳು ಇಲ್ಲದೆ ಕುಟುಂಬ ಅನಾಥವಾಗಿದೆ. ಮನೆ ದನದ ಕೊಟ್ಟಿಗೆಯಂತಿದೆ.
ಈ ವಿಚಾರ ತಿಳಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ತಂಡವೊಂದನ್ನು ಉಳ್ಳಾಲದ ಅಂಬ್ಲಮೊಗರುವಿಗೆ ಕಳುಹಿಸಿ ಮನೆಯ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಿದರು. ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಸಾಲೆತ್ತೂರು ಬಂಟರ ಸಂಘದ ಕೋಶಾಧಿಕಾರಿ ಅಮರೇಶ್ ಶೆಟ್ಟಿ ಮೊದಲಾದವರು ಅಶೋಕ್ ಅವರ ಮನೆಗೆ ಭೇಟಿ ನೀಡಿ ಒಕ್ಕೂಟಕ್ಕೆ ವರದಿ ಸಲ್ಲಿಸಿದ್ದ ಬೆನ್ನಲ್ಲೇ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ತಕ್ಷಣ ಆರ್ಥಿಕ ನೆರವು ನೀಡಿ ಕುಟುಂಬಕ್ಕೆ ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

Trending

Exit mobile version