ಬೆಂಗಳೂರು

ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ 

Published

on

ಬೆಳಗಾವಿ,ಡಿ 26(Zoom Karnataka): ಜಮ್ಮು ಕಾಶ್ಮೀರದ ಪೂಂಚ್​​ನಲ್ಲಿ‌ ಸೇನಾ ವಾಹನ ಕಂದಕಕ್ಕೆ ಉರುಳಿ ಅಪಘಾತಕ್ಕೀಡಾದ ಘಟನೆಯಲ್ಲಿ ಮೃತಪಟ್ಟ ಯೋಧರ ಪಾರ್ಥಿವ ಶರೀರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ಗೌರವ ಸಲ್ಲಿಸಿದರು.

ಬೆಳಗಾವಿ ತಾಲೂಕಿನ ಸಾಂಬ್ರಾ ಪಂತನಗರದ ಸುಬೇದಾರ್‌ ದಯಾನಂದ ತಿರಕಣ್ಣವರ (45) ಹಾಗೂ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿಯ ಮಹೇಶ ನಾಗಪ್ಪ ಮರಿಗೊಂಡ (25) ಅವರಿಗೆ ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಯುದ್ಧ ಸ್ಮಾರಕದಲ್ಲಿ ಸಿಎಂ ಗೌರವ ನಮನ ಅರ್ಪಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ”ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಮೃತರಾಗಿರುವುದು ಅತ್ಯಂತ ನೋವಿನ ಸಂಗತಿ. ನಾಲ್ವರೂ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ” ಎಂದರು.

”ದಯಾನಂದ ತಿರುಕಣ್ಣನವರ, ಚಿಕ್ಕೋಡಿ‌ ಧನರಾಜ್ ಸುಭಾಷ್, ಬಾಗಲಕೋಟೆಯ ಮಹೇಶ್ ನಾಗಪ್ಪ, ಕುಂದಾಪುರದ ಅನೂಪ್ ಪೂಜಾರಿ ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ಸರ್ಕಾರದಿಂದ ಕುಟುಂಬ ವರ್ಗಕ್ಕೆ ಪರಿಹಾರ ಒದಗಿಸುತ್ತೇವೆ. ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನೂ ನೀಡಲಾಗುವುದು” ಎಂದು ಸಿಎಂ ಭರವಸೆ ನೀಡಿದರು.

ಬಿಜೆಪಿಯವರಿಗೆ ತಿರುಗೇಟು: ಇದೇ ವೇಳೆ, ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ಹೆಸರಿಡುವ ಬಗ್ಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ”ಯಾವುದೇ ಒಳ್ಳೆಯ ಕೆಲಸವನ್ನು ವಿರೋಧಿಸುವುದೇ ಬಿಜೆಪಿಯವರ ಅಭ್ಯಾಸ. ಆದರೆ ಬಿಜೆಪಿಯವರೇ ಆದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ನಗರಪಾಲಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ” ಎಂದು ತಿರುಗೇಟು ಕೊಟ್ಟರು‌.

ಈ ವೇಳೆ ಸಚಿವರಾದ ಹೆಚ್.ಸಿ.ಮಹದೇವಪ್ಪ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಅಶೋಕ ಪಟ್ಟಣ ಸೇರಿ‌ ಸೇನಾಧಿಕಾರಿಗಳು, ಮೃತ ಯೋಧರ ಕುಟುಂಬಸ್ಥರು, ಮಾಜಿ ಸೈನಿಕರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Trending

Exit mobile version