ಕರಾವಳಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ

Published

on

ಮಂಗಳೂರು, ಡಿ04(Zoom Karnataka): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ನವೆಂಬರ್ 30 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಾಂಬ್ ಬೆದರಿಕೆ ಬಂದಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ಮಾದರಿಯಲ್ಲಿ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಬಂದಿತ್ತು. ಈಗ ಬಂದಿರುವ ಇ-ಮೇಲ್ ಮೂಲಕ ಕಳುಹಿಸಲಾದ ಸಂದೇಶದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿದೆ.

ಬೆಳಗ್ಗೆ 10 ಗಂಟೆಗೆ ಅಕ್ರಂ ವೈಕರ್ ಎಂಬ ಹೆಸರಿನ ಐಡಿಯಿಂದ ಇ-ಮೇಲ್ ಬಂದಿದೆ. ಡ್ರಗ್ ಕಿಂಗ್‌ಪಿನ್ ಜಾಫರ್ ಸಾದಿಕ್ ಮತ್ತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕೃತಿಗಾ ಉದಯನಿಧಿ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಈಗ ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ಟಿಎನ್‌ಎಲ್‌ಎ ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಎಸ್.ಮಾರನ್ ಅವರನ್ನು ಬಿಡುಗಡೆ ಮಾಡುವಂತೆಯೂ ಇ-ಮೇಲ್ ಒತ್ತಾಯಿಸಿದೆ. ಬೆದರಿಕೆಯ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತಮಿಳುನಾಡು ಡಿಜಿಪಿಯ ಪುತ್ರಿ ದೌದಿ ಜೀವಾಲ್‌ ಅವರನ್ನು ಬಳಸಿಕೊಂಡು ಪಾಕಿಸ್ತಾನದ ಐಎಸ್‌ಐ ನಡೆಸಿದೆ ಎನ್ನಲಾದ 2006ರ ರಾಮೇಶ್ವರಂ ಕೆಫೆ ಸ್ಫೋಟದ ಬಗ್ಗೆಯೂ ಇಮೇಲ್‌ನಲ್ಲಿ ಉಲ್ಲೇಖಗಳಿವೆ. ಅಕ್ಟೋಬರ್ 25 ರಂದು ತಿರುಪತಿಯ ಎರಡು ಪ್ರಸಿದ್ಧ ಹೋಟೆಲ್‌ಗಳಿಗೆ ಬೆದರಿಕೆ ಇಮೇಲ್ ಕಳುಹಿಸಲಾದ ಘಟನೆಯ ಬೆನ್ನಲ್ಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಬಾಂಬ್ ಬೆದರಿಕೆ ಬಂದಿದೆ.

ಹಿಂದಿನ ಬೆದರಿಕೆಯಲ್ಲಿ ಜಾಫರ್ ಸಾದಿಕ್ ಮತ್ತು ಕೃತಿಗಾ ಉದಯನಿಧಿ ಹೆಸರು ಕೂಡ ಉಲ್ಲೇಖಿಸಲ್ಪಟ್ಟಿದ್ದು, ಇದಕ್ಕೆ ಕಾರಣವಾದ ವ್ಯಕ್ತಿಗಳು ತಮಿಳುನಾಡಿಗೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಾಂಬ್ ದಾಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ವಿಮಾನ ನಿಲ್ದಾಣಕ್ಕೆ ಎರಡು ಬಾರಿ ಹುಸಿ ಬಾಂಬ್ ಕರೆ ಬಂದಿತ್ತು.

ಈ ನಡುವೆ ಬೆಂಗಳೂರಿನ ಹೊಟೇಲ್‌ಗೆ ಮತ್ತೊಂದು ಬಾಂಬ್‌ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ. ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಂಗಿ ರಾಮನಗರದಲ್ಲಿರುವ ಪ್ರತಿಷ್ಠಿತ ಐಬಿಎಸ್ ಹೋಟೆಲ್ ಗೆ ನ.11ರಂದು ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು.

Leave a Reply

Your email address will not be published. Required fields are marked *

Trending

Exit mobile version