ತಾಜಾ ಸುದ್ದಿ

ಫೆಂಗಲ್ ಚಂಡಮಾರುತ ಮಳೆಯ ಅಬ್ಬರ: 10 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

Published

on

ಬೆಂಗಳೂರು, ಡಿ 03(Zoom Karnataka): ತಮಿಳುನಾಡು ಹಾಗೂ ಪುದುಚೇರಿಯಲ್ಲಿ ತಲ್ಲಣ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ ಇದೀಗ ಕರ್ನಾಟಕದ ಬಾಗಿಲಿಗೂ ಬಂದಿದೆ. ಸೈಕ್ಲೋನ್ ಪರಿಣಾಮ ಕಳೆದೆರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಇವತ್ತು ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದತ್ತ ಹೊರಟಿರುವ ಫೆಂಗಲ್‌ ಚಂಡಮಾರುತ ಈಗ ಕರ್ನಾಟಕದಲ್ಲೂ ಕಂಪನ ಸೃಷ್ಟಿಸಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಅಬ್ಬರಿಸುವ ಸಾಧ್ಯತೆಯಿದೆ.

ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಕಾರಣ ಕರ್ನಾಟಕದ 10 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕದ ಎಲ್ಲೆಲ್ಲಿ ಫೆಂಗಲ್‌ ಎಫೆಕ್ಟ್‌?

ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಆಗಲಿದೆ ಎಂಬ ಮುನ್ಸೂಚನೆ ಇದೆ. ಇನ್ನು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರಕನ್ನಡ, ತುಮಕೂರು, ಹಾವೇರಿ ಜಿಲ್ಲೆಗಳ ಮೇಲೂ ನಿಗಾ ಇಡುವಂತೆ ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

ಹೀಗಾಗಿ, ಫೆಂಗಲ್‌ನಿಂದ ಹೆಚ್ಚು ಮಳೆಯಾಗಬಹುದು ಎಂಬ ಮುನ್ಸೂಚನೆ ಇರುವ 10 ಜಿಲ್ಲೆಗಳ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮವಾಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ರಾತ್ರಿಯಿಡೀ ಮಳೆ: ಶಾಲೆಗಳಿಗಿಲ್ಲ ರಜೆ

ಬೆಂಗಳೂರು ನಗರದಲ್ಲಿ ಸೈಕ್ಲೋನ್‌ನಿಂದಾಗಿ ಸೋಮವಾರ ರಾತ್ರಿಯಿಡೀ ಮಳೆಯಾಗಿದೆ. ಸಂಜೆ ವೇಳೆಗೆ ಶುರುವಾಗಿದ್ದ ಮಳೆ ಮಧ್ಯರಾತ್ರಿವರೆಗೂ ಬಿಡದೇ ಸುರಿದಿತ್ತು. ಕೆಲಸದಿಂದ ತೆರಳುವವರು, ವಾಹನ ಸವಾರರು ಪರದಾಡಿದರು.

ಇಂದು ಕೂಡಾ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಶಾಲೆ-ಕಾಲೇಜುಗಳಿಗೆ ಈವರೆಗೆ ಯಾವುದೇ ರಜೆ ಘೋಷಣೆ ಆಗಿಲ್ಲ.

ಕರಾವಳಿ ಜಿಲ್ಲೆಗಳಲ್ಲಿ ಅಲರ್ಟ್‌: ತೀರ್ಥಸ್ನಾನಕ್ಕೂ ಅಡ್ಡಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಫೆಂಗಲ್‌ ಪರಿಣಾಮ ಹೆಚ್ಚಾಗಿ ಕಾಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಲವು ಕ್ರಮಗಳನ್ನ ಕೈಗೊಂಡಿದೆ. ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ಸೂಚನೆ ನೀಡಲಾಗಿದೆ. ಕುಮಾರಧಾರ ನದಿಗೆ ಇಳಿಯದಂತೆ ಸೂಚಿಸಲಾಗಿದೆ.

ಸಚಿವರ ಕಾರ್ಯಕ್ರಮಗಳು ರದ್ದು

ಫೆಂಗಲ್‌ ಚಂಡಮಾರುತ ಪರಿಣಾಮದಿಂದಾಗಿ ಇವತ್ತು ಮಂಗಳೂರಿನ ಪುರವನದಲ್ಲಿ ನಡೆಯಬೇಕಿದ್ದ ಬಹುಸಂಸ್ಕೃತಿ ಉತ್ಸವವನ್ನು ಮುಂದೂಡಲಾಗಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಸಚಿವ ಶಿವರಾಜ್ ತಂಗಡಗಿ ಪ್ರವಾಸ ರದ್ದಾಗಿದೆ.

ಸೋಮವಾರ ಮಂಗಳೂರಿನ ಕೊಟ್ಟಾರ ಚೌಕಿ, ತಲಪಾಡಿ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಇನ್ನು ಜಿಲ್ಲಾಪಂಚಾಯ್ತಿ ಸಂಭಾಗಣಕ್ಕೂ ಮಳೆ ನೀರು ನುಗ್ಗಿತ್ತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸಭೆ ನಡೆಸುತ್ತಿರುವಾಗಲೇ ಸಭಾಂಗಣಕ್ಕೆ ಮಳೆ ನೀರು ನುಗ್ಗಿತ್ತು.

ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ಭಾರೀ ಮಳೆ

ಉಡುಪಿ ಜಿಲ್ಲೆಯಲ್ಲೂ ಸೋಮವಾರ ಸಂಜೆಯಿಂದಲೇ ಭಾರೀ ಮಳೆಯಾಗುತ್ತಿದೆ. ಉಡುಪಿ ನಗರ, ಕಾರ್ಕಳ, ಕುಂದಾಪುರ, ಕಾಪು, ಬೈಂದೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಆರೆಂಜ್‌ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಾಮರಾಜನಗರದಲ್ಲಿ ಜೋರು ಮಳೆಯಾಗುತ್ತಿದ್ದು, ಸುವರ್ಣಾವತಿ ಜಲಾಶಯದಿಂದ 200 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಹಾವೇರಿ, ಶಿವಮೊಗ್ಗದಲ್ಲೂ ಸೈಕ್ಲೋನ್ ಪರಿಣಾಮ ಬೀರಿದೆ.

ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಥಂಡಿ ಜೊತೆಗೆ ಮಳೆಯಿಂದ ಕಾಫಿ ಬೀಜ ಒಳಗಿಸುವುದು ಸವಾಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಹೂ, ಹಣ್ಣು ತರಕಾರಿ ಬೆಳೆಗಳು ನೆಲಕಚ್ಚಿವೆ. ರಾಗಿ ಬೆಳೆ ಮೊಳಕೆ ಹೊಡೆಯಲು ಆರಂಭಿಸಿದೆ. ಚಿತ್ರದುರ್ಗದಲ್ಲಿ ಕಡಲೆ, ಮೆಕ್ಕೆಜೋಳ, ತೊಗರಿ ಮತ್ತಿತರೆ ಬೆಳೆಗಳಿಗೆ ಚಂಡಮಾರುತ ಹೊಡೆತ ನೀಡಿದೆ.

Leave a Reply

Your email address will not be published. Required fields are marked *

Trending

Exit mobile version