ರಾಜ್ಯ ಸುದ್ದಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಂಸದ ಕೋಟ ಶ್ರೀನಿವಾಸ್​ ಪುಜಾರಿ ವಿರುದ್ಧ ಪ್ರಕರಣ ರದ್ದು

Published

on

ಬೆಂಗಳೂರು,ನ 23(Zoom Karnataka): ಕಳೆದ ಲೋಕಸಭೆ ಚುನಾವಣೆ ವೇಳೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಖಾಸಗಿ ಕಾಲೇಜು ಆವರಣದಲ್ಲಿ ರಾಜಕೀಯ ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ದಾಖಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಚುನಾವಣಾ ಸಂಚಾರ ಜಾಗೃತ ದಳದ ಅಧಿಕಾರಿಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಸಂಚಾರ ಜಾಗೃತ ದಳದ ಅಧಿಕಾರಿಯು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್​ 188ರ (ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘಿಸಿದ ಆರೋಪ) ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ಈ ದೂರು ದಾಖಲಿಸುವ ಅಧಿಕಾರ ವ್ಯಾಪ್ತಿಯನ್ನು ಜಾಗೃತ ದಳದ ಅಧಿಕಾರಿ ಹೊಂದಿಲ್ಲ. ಆದ್ದರಿಂದ ಈ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿದರು.

ಈ ವಾದ ಪುರಸ್ಕರಿಸಿದ ಪೀಠ, ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ದೂರನ್ನು ರದ್ದುಪಡಿಸಿತು.

ಪ್ರಕರಣದ ಹಿನ್ನೆಲೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ಧ ಕೋಟ ಶ್ರೀನಿವಾಸ ಪೂಜಾರಿ ಅವರು, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಖಾಸಗಿ ಕಾಲೇಜು ಆವರಣದಲ್ಲಿ 2024ರ ಮಾ. 30ರಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು.

“ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಲಾಗಿದೆ. ಭಾಷಣದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ವಿದ್ಯಾರ್ಥಿ ವೃಂದಕ್ಕೆ ಹಲವು ಉಚಿತ ಯೋಜನೆ ಜಾರಿಗೊಳಿಸಲಾಗುವುದು ಎಂಬ ಭಾಷಣದಲ್ಲಿ ಭರವಸೆ ನೀಡಿದ್ದಾರೆ. ಆ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿ ಚುನಾವಣಾ ಸಂಚಾರ ಜಾಗೃತ ದಳದ ಅಧಿಕಾರಿಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ 2024ರ ಏ.4ರಂದು ಖಾಸಗಿ ದೂರು ದಾಖಲಿಸಿದ್ದರು. ದೂರನ್ನು ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು ಸಂಸದ ಕೋಟ ಶ್ರಿನಿವಾಸ ಪೂಜಾರಿ ವಿರುದ್ಧ ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Leave a Reply

Your email address will not be published. Required fields are marked *

Trending

Exit mobile version