ಶ್ರಾವಣ ಅಮವಾಸ್ಯೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಕಡಲಲ್ಲಿ ಭಕ್ತರು ಪವಿತ್ರ ತೀರ್ಥ ಸ್ನಾನ
ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಕಡಲಲ್ಲಿ ಸಹಸ್ರಾರು ಮಂದಿ ಭಕ್ತರು ಪವಿತ್ರ ತೀರ್ಥ ಸ್ನಾನ ಮಾಡಿ ಪುನೀತಾರಾಗಿದ್ದಾರೆ
ಮಂಗಳೂರು, ZoomKarnataka, Sep 02 : ಸೋಮೇಶ್ವರದ ಸೋಮನಾಥ ದೇವಸ್ಥಾನದ ಸಾಂಪ್ರದಾಯಿಕ ಉತ್ಸವಗಳಲ್ಲಿ ಶ್ರಾವಣ ಅಮವಾಸ್ಯೆಯ ಪವಿತ್ರ ಸಮುದ್ರ ತೀರ್ಥ ಸ್ನಾನವು ಪ್ರಾಮುಖ್ಯತೆ ಪಡೆದಿದೆ. ಮಳೆಗಾಲದಲ್ಲಿ ಪ್ರಕ್ಷುಬ್ಧಗೊಳ್ಳುವ ಕಡಲು ಶ್ರಾವಣ ಮಾಸದಲ್ಲಿ ಶಾಂತವಾಗುವುದರ ಜೊತೆಗೆ ಕಡಲ ನೀರಲ್ಲಿ ಔಷಧೀಯ ಗುಣದ ಲವಣಾಂಶಗಳು ಸಮೃದ್ಧಿಗೊಂಡಿರುತ್ತದೆ . ಈ ನೀರಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾಧಿ ಮಾತ್ರವಲ್ಲದೆ ಇನ್ನಿತರ ಕಾಯಿಲೆಗಳು ದೂರವಾಗುತ್ತದೆ. ಭಕ್ತರು ಶ್ರಾವಣ ಸೋಮವಾರ ಅಮವಾಸ್ಯೆಯಂದು ಸೋಮೇಶ್ವರದ ಸಮುದ್ರದಲ್ಲಿ ಪವಿತ್ರ ತೀರ್ಥ ಸ್ನಾನವೆಂಬ ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ಅರಿವಿನಿಂದ ಸ್ನಾನ ಮಾಡಿ ಪುನೀತಾರಾಗಿದ್ದಾರೆ
ಭಕ್ತರು ವೀಳ್ಯವನ್ನು ಸಮುದ್ರ ರಾಜನಿಗೆ ಅರ್ಪಿಸಿ ನಂತರ ಸಮುದ್ರ ಸ್ನಾನ ಮಾಡಿ ಕಡ್ಡಾಯವಲ್ಲದಿದ್ದರೂ ಸಮೀಪದ ಗಧಾ ತೀರ್ಥ ಕೆರೆಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳುತ್ತಾರೆ. ಸಮುದ್ರದಲ್ಲಿ ತೀರ್ಥ ಸ್ನಾನ ಮಾಡುವ ಸಂದರ್ಭ ಯಾವುದೇ ಅನಾಹುತಗಳು ನಡೆಯದಂತೆ ನುರಿತ ಉಳ್ಳಾಲ ಮೊಗವೀರಪಟ್ಟಣದ ಜೀವರಕ್ಷಕ ಈಜುಗಾರ ಸಂಘದ ಸಿಬ್ಬಂದಿಗಳು ಕಣ್ಗಾವಲು ಇಟ್ಟಿದಾರೆ. ದೇವಸ್ಥಾನಕ್ಕೆ ತೆರಳಿದ ಭಕ್ತರು ಸೋಮನಾಥನಿಗೆ ಪ್ರಿಯವಾದ ಸೇವೆ ಸಲ್ಲಿಸಿ ಕೃತಾರ್ಥರಾಗುತಿದಾರೆ.
ಸೋಮೇಶ್ವರದಲ್ಲಿ ತೀರ್ಥ ಸ್ನಾನ ಮಾಡಲು ಭಕ್ತರ ದಂಡು ಕೊಂಚ ವಿರಳ
ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರ ಕ್ಷೇತ್ರದಲ್ಲಿ ಗೃಹ ಮತ್ತು ಕೃಷಿ ಬಳಕೆಯ ವಿವಿಧ ರೀತಿಯ ಕತ್ತಿಗಳ ವ್ಯಾಪಾರ ಜೋರಾಗಿರುತ್ತದೆ. ಕೃಷಿ ಚಟುವಟಿಕೆ ಆರಂಭದ ಸಮಯವಾದುದರಿಂದ ಸಹಸ್ರಾರು ಮಂದಿ ಸೇರೋ ತೀರ್ಥ ಸ್ನಾನದ ಸಂಧರ್ಭದಲ್ಲಿ ಹಿಂದಿನಿಂದಲೂ ಇಲ್ಲಿ ಕತ್ತಿ ಮಾರಾಟದ ಸಂಪ್ರದಾಯ ಬೆಳೆದು ಬಂದಿದೆ.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಸಹಿತ ವಿವಿಧೆಡೆಯಿಂದ ಭಕ್ತಾದಿಗಳು ಬೆಳಗ್ಗಿನಿಂದಲೇ ಆಗಮಿಸಿ ತೀರ್ಥಸ್ನಾನದಲ್ಲಿ ತೊಡಗಿಸಿಕೊಂಡರು. . ಭಕ್ತಾದಿಗಳು ಗದಾತೀರ್ಥದಲ್ಲಿ ಸ್ನಾನ ಮಾಡಿದ ಬಳಿಕ ಸಮುದ್ರದಲ್ಲಿ ಸ್ನಾನ ನೆರವೇರಿಸಿದರೆ, ಕೆಲವು ಭಕ್ತಾದಿಗಳು ಸಮುದ್ರದಲ್ಲಿ ಸ್ನಾನ ನೆರವೇರಿಸಿ ಬಳಿಕ ಗದಾತೀರ್ಥದಲ್ಲಿ ಸ್ನಾನ ನೆರವೇರಿಸಿದರು.