ಮನೋರಂಜನೆ

ಎಚ್ಚರಿಕೆ ನಡುವೆಯೂ‌ ಡೀಪ್‌ಫೇಕ್ ಕಾಟ ಮುಂದುವರಿಕೆ: ತಾರೆಯರಿಗೆ ಹೆಚ್ಚಿದ ಆತಂಕ

Published

on

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿಸಿದೆ. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಡೀಪ್ ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್ ಫೇಕ್ ಕಾಟ ಮುಂದುವರಿದಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್‍ ಫೋಟೋ ಕೂಡ ಡೀಪ್ ಫೇಕ್ ಮಾಡಲಾಗಿದೆ.

ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದರು. ಬಳಿಕ ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿತ್ತು. ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸೂಪರ್ ಸ್ಟಾರ್, ನಟ ಅಮಿತಾಬ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ. ಇಂತಹ ಮಾರ್ಫಿಂಗ್ ವಿಡಿಯೋಗಳ ನಿಯಂತ್ರಣ ಸಾಮಾಜಿಕ ಜಾಲತಾಣಗಳ ಹೊಣೆ. ಅಪ್‌ಲೋಡ್ ಆದ 36 ಗಂಟೆಗಳಲ್ಲಿ ಇವುಗಳನ್ನು ತೊಲಗಿಸದಿದ್ದರೆ ಅಂತಹ ಸಾಮಾಜಿಕ ಜಾಲತಾಣವನ್ನು ಕೋರ್ಟ್‌ಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್+ಮೆಷಿನ್ ಲರ್ನಿಂಗ್ ಸಹಾಯದಿಂದ ಮಾರ್ಫಿಂಗ್ ವಿಡಿಯೋ, ಫೋಟೋಗಳು ಸೃಷ್ಟಿ ಮಾಡುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ಒಬ್ಬ ವ್ಯಕ್ತಿಯಂತೆಯೇ ಸೇಮ್ ಟು ಸೇಮ್ ಡೂಪ್ ಸೃಷ್ಟಿಸಬಹುದು. ಥಟ್ಟನೇ ನೋಡಿದಾಗ ಯಾವುದೇ ವ್ಯತ್ಯಾಸವೇ ಗೊತ್ತಾಗುವುದಿಲ್ಲ.
ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್‌ ಟೂಲ್‌ ಮೂಲಕ ಜೋಡಿಸುವುದು ಹಳೆಯ ವಿಚಾರ. ಈ ಫೋಟೋಗಳನ್ನು ನೋಡುವಾಗ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಡೀಪ್‌ ಫೇಕ್‌ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ವಿಡಿಯೋ ಎಷ್ಟು ನೈಜತೆ ಇರುತ್ತದೆ ಅಂದರೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆ ಇರುತ್ತದೆ. ಮೂಲ ವಿಡಿಯೋ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವಿಡಿಯೋದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ.

Leave a Reply

Your email address will not be published. Required fields are marked *

Trending

Exit mobile version