ಅಯೋಧ್ಯೆ,ನ 04(Zoom Karnataka): ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ಜನವರಿ 22 ರಂದು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವತಃ ತಾವೇ ರಾಮ ಲಲ್ಲಾ ಮೂರ್ತಿಯನ್ನು ರಾಮ ಮಂದಿರದ ಗರ್ಭ ಗೃಹಕ್ಕೆ ಹೊತ್ತು ತರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ರಾಮ ಲಲ್ಲಾ ಮೂರ್ತಿ ಭಗವಾನ್ ಶ್ರೀರಾಮ ಮಂದಿರದಿಂದ 500 ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ದೇಗುಲದಲ್ಲಿ ಇದೆ. ಈ ಮೂರ್ತಿಯನ್ನು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದವರೆಗೂ ಪ್ರಧಾನಿ ಮೋದಿ ಅವರು ಕಾಲ್ನಡಿಗೆ ಮೂಲಕ ತಮ್ಮ ಕೈಯ್ಯಾರೆ ಹೊತ್ತು ತಂದು ಪ್ರತಿಷ್ಠಾಪನೆಗೆ ನೆರವಾಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂಥಾದ್ದೊಂದು ಪ್ರತಿಷ್ಠಿತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿ ಅವರು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹಕ್ಕೆ ರಾಮ ಲಲ್ಲಾ ಮೂರ್ತಿಯನ್ನು ಹೊತ್ತು ತರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ RSS ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಕೂಡಾ ಕಾಲ್ನಡಿಗೆ ವೇಳೆ ಸಾಥ್ ನೀಡಲಿದ್ದಾರೆ.
ಇನ್ನು ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂಜಾ ಕೈಂಕರ್ಯಗಳ ನೇತೃತ್ವವನ್ನೂ ಪ್ರಧಾನಿ ಮೋದಿ ಅವರೇ ವಹಿಸಲಿದ್ದಾರೆ. ಮೋದಿ ಅವರ ಮೂಲಕವೇ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಜನವರಿ 22 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ಒಳಗಿನ ಶುಭ ಗಳಿಗೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.