ಮನೋರಂಜನೆ

ರಾಜ್ಯಾದ್ಯಂತ ಆಗಸ್ಟ್ 25 ರಂದು ತೆರೆಗೆ ಬರಲಿದೆ ಟೋಬಿ ಸಿನಿಮಾ.

Published

on

ಮಂಗಳೂರು: ಟೋಬಿ’ ನನ್ನೊಬ್ಬನ ಚಿತ್ರವಲ್ಲ, ನನ್ನ ಇಡೀ ತಂಡದ ಚಿತ್ರ. ಇಡೀ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಇಂದು ಹೆಚ್ಚು ಖುಷಿಯಾಗಿರುವುದು ಬೇರೆ ಚಿತ್ರತಂಡದವರು ಬಂದು ನಮ್ಮ ಚಿತ್ರಕ್ಕೆ ಪ್ರಮೋಷನ್ ಮಾಡುತ್ತಿರುವುದು. “ಹಾಸ್ಟೆಲ್ ಹುಡುಗರು” ತಂಡ ಹಾಗೂ ನಮ್ಮ ಚಿತ್ರ ಬಿಡುಗಡೆಯಾಗಿ ಒ೦ದೇ ವಾರಕ್ಕೆ ರಕ್ಷಿತ್‌ ಶೆಟ್ಟಿ ಅವರ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರ ಬಿಡುಗಡೆಯಾಗುತ್ತಿದೆ. ಇವರಿಬ್ಬರೂ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆ. ಇದು ಮುಂದುವರೆಯಲಿ, ನಮ್ಮ ಚಿತ್ರ ಆಗಸ್ಟ್ 25 ರಂದು ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ರಾಜ್ ಬಿ ಶೆಟ್ಟಿ. ಅವರು ಸಂಜೆ ಮಂಗಳೂರು ಬಿಜೈ ಯಲ್ಲಿರುವ ಒಸಿಯನ್ ಪರ್ಲ್ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಟೋಬಿ ಚಿತ್ರದ ನಟಿ ಚೈತ್ರ ಜೆ ಆಚಾರ್, ರಾಜ್ ದೀಪಕ್ ಶೆಟ್ಟಿ, ಯತೀಶ್ ಬೈಕಂಪಾಡಿ, ನಿರ್ಮಾಪಕರಾದ ರವಿ ರೈ ಕಳಸ ಜೊತೆಗೆ ಇಡೀ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.


“ಒಂದು ಮೊಟ್ಟೆಯ ಕಥೆ” ಎಂಬ ಸರಳವಾದ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, “ಗರುಡ ಗಮನ ವೃಷಭ ವಾಹನ’ ಎಂಬ ಚಿತ್ರದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಜನಮೆಚ್ಚುಗೆಯನ್ನುಗಳಿಸಿದ್ದರು. ಈಗ ಅದೇ ತಂಡದೊಂದಿಗೆ “ಟೋಬಿ” ಎನ್ನುವ ಅದ್ಧೂರಿ ವೆಚ್ಚ‌ದ ಸಿನಿಮಾ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರ ಮನ ಗೆದ್ದಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 8 ಮಿಲಿಯನ್ ವೀಕ್ಷಣೆಯನ್ನು ದಾಟಿ ಮುನ್ನುಗ್ಗುತ್ತಿದೆ.

ಟೋಬಿ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿಯ ಜೊತೆಗೆ ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಮತ್ತು ಇನ್ನಷ್ಟು ಕಲಾವಿದರ ತಾರಾಬಳಗವಿದ್ದು, ಬಾಸಿಲ್ ಅಲ್ದಾರ್ ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಅವರ ಹಿನ್ನಲೆ ಸಂಗೀತ, ಮತ್ತು ಪ್ರವೀಣ್ ಶೀಯಾನ್ ಅವರ ಛಾಯಾಗ್ರಹಣ ಟ್ರೈಲರ್‌ಗೆ ಮತ್ತಷ್ಟು ಕೌತುಕತೆಯನ್ನು ನೀಡಿದೆ. ಚಿತ್ರವನ್ನು ಲೈಟರ್ ಬುದ್ಧ ಫಿಲಮ್ಸ್, ಅಗಸ್ತ್ಯ ಫಿಲಮ್ಸ್, ಕಾಫೀ ಗ್ಯಾಂಗ್ ಸ್ಟುಡಿಯೋ ಮತ್ತು ಸ್ಮೂತ್ ಸೈಲರ್ಸ್‌ ಜಂಟಿಯಾಗಿ ನಿರ್ಮಿಸಿದ್ದು ಇದೇ ಆಗಸ್ಟ್ 25 ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.

Leave a Reply

Your email address will not be published. Required fields are marked *

Trending

Exit mobile version