ಕರಾವಳಿ

ಪ್ರಾಚೀನ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಿಗೆ ಸರ್ಕಾರ ಕೂಡಾ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಲಿದೆ- ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Published

on


ಉಜಿರೆ ಜು 08 (zoomkarnataka) : ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನದ ಪದವೀಧರರು ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಯ ಪ್ರಚಾರದ ರಾಯಬಾರಿಗಳಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಇಪ್ಪತ್ತೊಂಬತ್ತನೆ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.

ಸುಶಿಕ್ಷಿತ ಮತ್ತು ಆರೋಗ್ಯವಂತ ಮಾನವ ಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು ಆಗಿದೆ. ಇತರ ಎಲ್ಲಾ ಲೌಕಿಕ ಸಂಪತ್ತಿಗಿAತ ಆರೋಗ್ಯವಂತ, ಸುಶಿಕ್ಷಿತ ಹಾಗೂ ಸಭ್ಯ ನಾಗರಿಕರೆ ದೇಶದ ಪ್ರಗತಿಗೆ ಪ್ರೇರಕರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಕೃತಿಚಿಕಿತ್ಸೆ, ಆಯುರ್ವೇದ, ಹೋಮಿಯೊಪತಿ, ಯೋಗಾಭ್ಯಾಸ ಮೊದಲಾದ ಪ್ರಾಚೀನ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಿಗೆ ಸರ್ಕಾರ ಕೂಡಾ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಸಂಸ್ಥೆಯ ಶಿಸ್ತು, ಸ್ವಚ್ಛತೆ, ಸಮಾರಂಭದ ಅಚ್ಚುಕಟ್ಟುತನವನ್ನು ಸಚಿವರು ಶ್ಲಾಘಿಸಿ ಅಭಿನಂದಿಸಿದರು. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮಗಳಲ್ಲಿ ಸದೃಢವಾಗಿರುವುದೇ ಆರೋಗ್ಯವಂತರ ಲಕ್ಷಣವಾಗಿದೆ. ಆರೋಗ್ಯವಂತ ಸದೃಢ ಸಮಾಜದಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಅವರು ಹೇಳಿದರು. ಆಧುನಿಕ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಜೀವನ ಮೊದಲಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಕೃತಿಚಿಕಿತ್ಸೆ ಮತ್ತು ಯೋಗಾಭ್ಯಾಸ ಉತ್ತಮ ಕ್ರಮವಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ನೂತನ ಪದವೀಧರರು ಜನರಿಗೆ ಪ್ರಕೃತಿಚಿಕಿತ್ಸಾ ಪದ್ಧತಿಯಲ್ಲಿ ನಂಬಿಕೆ, ವಿಶ್ವಾಸ ಮತ್ತು ಗೌರವ ಬರುವಂತೆ ಸಾಧಕರ ಶುಶ್ರೂಷೆ ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಇಂದು ದೈಹಿಕ ಶ್ರಮ ಹಾಗೂ ವ್ಯಾಯಾಮ ಕಡಿಮೆಯಾಗಿ ಜನರು ಬೇಗನೆ ರೋಗ ರುಜಿನಗಳಿಗೆ ಒಳಗಾಗುತ್ತಾರೆ. ಪದವಿ ಹಾಗೂ ಪದಕ ಗಳಿಸುವುದಕ್ಕಿಂತಲೂ ಮಾನವೀಯತೆಯ ಸೇವೆಯೊಂದಿಗೆ ಯಶಸ್ವಿ ವೈದ್ಯರಾಗಬೇಕು. ಸೇವಾಕಾರ್ಯದಲ್ಲಿ ಯಶಸ್ವಿಯಾಗುವುದೇ ವೈದ್ಯರ ಗುರಿಯಾಗಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಡಾ. ಬಿಂದು ಕಾಲೇಜಿನ ವಾರ್ಷಿಕ ಸಾಧನೆ ಮತ್ತು ಚಟುವಟಿಕೆಗಳ ವರದಿ ಸಾದರ ಪಡಿಸಿದರು.
ಡಾ. ಸುಜಾತ, ಕೆ.ಜೆ. ಪ್ರತಿಜ್ಞಾವಿಧಿ ಬೋಧಿಸಿದರು.
ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡಾ. ಶಿವಪ್ರಸಾದ, ಕೆ. ಧನ್ಯವಾದವಿತ್ತರು.
ಡಾ. ಸಂದೇಶ್ ಪಾಟೀಲ್ ಮತ್ತು ಕುಮಾರಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

Trending

Exit mobile version