ರಾಷ್ಟ್ರ ಸುದ್ದಿ

ಬಾಲಕನನ್ನು ಬಲಿ ಪಡೆದ ಮೊಸಳೆ- ಹೊಡೆದು ಕೊಂದು ಹಾಕಿದ ಗ್ರಾಮಸ್ಥರು

Published

on

ಬಾಲಕನನ್ನು ಬಲಿ ಪಡೆದ ಮೊಸಳೆ- ಹೊಡೆದು ಕೊಂದು ಹಾಕಿದ ಗ್ರಾಮಸ್ಥರು

ಬಿಹಾರ, ಜೂ 14 (Zoom Karnataka): ಗಂಗಾ ನದಿಗೆ ನೀರು ತರಲು ಹೋಗಿದ್ದ 10 ವರ್ಷದ ಬಾಲಕನನ್ನು ಮೊಸಳೆ ಬಲಿ ಪಡೆದಿದ್ದು, ಇದರಿಂದ ಕುಪಿತರಾದ ಗ್ರಾಮಸ್ಥರು ಮೊಸಳೆಯನ್ನು ಹೊಡೆದು ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೋಕುಲಪುರ ನಿವಾಸಿ ಧರ್ಮೇಂದ್ರ ದಾಸ್ ಎನ್ನುವವರು ಇತ್ತೀಚೆಗೆ ಬೈಕ್ ಖರೀದಿಸಿದ್ದು ಇದಕ್ಕಾಗಿ ಧಾರ್ಮಿಕ ವಿಧಿವಿಧಾನ ನಡೆಸಲು ತಮ್ಮ ಕುಟುಂಬದೊಂದಿಗೆ ಗಂಗಾ ನದಿಯ ದಡಕ್ಕೆ ಬಂದಿದ್ದಾರೆ. ದಾಸ್ ಅವರ ಮಗ ಅಂಕಿತ್ ನೀರನ್ನು ತರಲು ಗಂಗಾನದಿಯ ದಡಕ್ಕೆ ಹೋಗಿದ್ದಾಗ, ಆಗಲೇ ಹೊಂಚು ಹಾಕಿದ ಮೊಸಳೆಯು ಅವನನ್ನು ನದಿಗೆ ಎಳೆದುಕೊಂಡಿದೆ. ಬಾಲಕ ಅಂಕಿತ್‌ ಕಿರುಚಾಡಿದ್ದನ್ನು ನೋಡಿದ ಕುಟುಂಬಸ್ಥರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಏನೇ ಮಾಡಿದರೂ ಮೊಸಳೆ ಬಾಯಿಯಿಂದ ಜೀವಂತವಾಗಿ ಬಾಲಕನನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ.

ಈ ಘಟನೆ ಅಲ್ಲಿ ನೆರೆದಿದ್ದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ. ಸ್ಥಳೀಯರು ಮೀನಿನ ಬಲೆಯನ್ನು ಹರಡಿ ದೋಣಿಯ ಮೂಲಕ ಸಾಗಿ ನದಿಗಿಳಿದು ಮೊಸಳೆಯನ್ನು ಹಿಡಿದು ದಡಕ್ಕೆ ತಂದಿದ್ದಾರೆ. ದೊಣ್ಣೆಯಿಂದ ಮೊಸಳೆ ಮೇಲೆ ಹಲ್ಲೆಗೈದು ಸಾಯಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಗುವಿನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಬಿದುಪುರ ಠಾಣೆ ಪ್ರಭಾರಿ ಸಿರಾಜ್ ಹುಸೇನ್ ತಿಳಿಸಿದ್ದಾರೆ. ಮೊಸಳೆಯ ಶವವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಘಟನೆಯನ್ನು ಖಂಡಿಸಿದ್ದು,ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬದಲು ಈ ರೀತಿ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

Trending

Exit mobile version