ತಾಜಾ ಸುದ್ದಿ

‘ಶಾಸಕ ಹರೀಶ್ ಪೂಂಜಾ ಓರ್ವ ಬಚ್ಚಾ’-ತಿಮರೋಡಿ ವಾಗ್ದಾಳಿ

Published

on

ಬೆಳ್ತಂಗಡಿ, ಮೇ 26: “ಶಾಸಕ ಹರೀಶ್ ಪೂಂಜಾ ಓರ್ವ ಬಚ್ಚಾ, ಅವರು ತನ್ನ ಹುಡುಗರಿಗೆ ಕೇಸರಿ ಶಾಲು ಹಾಕಿಸಿ ಗೋವುಗಳನ್ನು ಇಂದು ಕಸಾಯಿಖಾನೆಗೆ ತಲುಪಿಸುವ ಕೆಲಸ ಮಾಡಿಸುತ್ತಿದ್ದಾರೆ” ಎಂದು ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ ಮಾಡಿದ್ದಾರೆ.

ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಶಾಸಕ ಪೂಂಜಾ ಸಾರ್ವಜನಿಕ ಸಭೆಯಲ್ಲಿ ತಮ್ಮ ವಿರುದ್ದ ಮಾಡಿದ ಆರೋಪಗಳಿಗೆ ಉತ್ತರಿಸಿ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಹರೀಶ್ ಪೂಂಜಾ ಹಿಂದೂ ಸಮಾಜಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ವೋಟು ಖರೀದಿ ಮಾಡಿ ಆಗಿರುವ ಜನನಾಯಕ. ತನ್ನ ಹುಡುಗರಿಗೆ ಕೇಸರಿ ಶಾಲು ಹಾಕಿಸಿ ಗೋವುಗಳನ್ನು ಇಂದು ಕಸಾಯಿಖಾನೆಗೆ ತಲುಪಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಹರೀಶ್ ಪೂಂಜಾ ಅವರು ಬೆಳ್ತಂಗಡಿ ಶಾಸಕರಾಗಿ ಅಧಿಕಾರ ಸ್ವೀಕರಿಸಿದ ನಂತರ ತಾಲೂಕಿನಲ್ಲಿ ಮತಾಂತರ, ಗೋಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಅವರ ಕಚೇರಿಯಿಂದಲೇ ಬಿಜೆಪಿ ಮುಖಂಡ ಮಂಡಿ ಗಣೇಶ್ ದನ ಸಾಗಾಟದಲ್ಲಿ ತೊಡಗಿದ್ದಾರೆ. ಜೊತೆಗೆ ಪೂಂಜಾ ಅವರು ಜಾತಿ ಆಧಾರದ ಮೇಲೆ ತಾಲೂಕನ್ನು ವಿಭಜಿಸಿ ಒಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತ ಹತ್ಯೆ ಮಾಡಿದ್ದಾರೆ ಎಂದ ಶಾಸಕ ಹರೀಶ್ ಪೂಂಜಾ ವಿರುದ್ದ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ ಇಲ್ಲವಾದರೆ ಈ ಆರೋಪ ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿ. ಶಾಸಕನಾಗಿ ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವೆಡೆಗೆ ನಿಮ್ಮ ನಡೆ ಇರಲಿ, ಅದು ಬಿಟ್ಟು ಕೇಸರಿ ಶಾಲು ಹೆಗಲಿಗೇರಿಸಿ ಸುಳ್ಳು ಹೇಳಿಕೆ ನೀಡಿ ನೀವ್ಯಾಕೆ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.

“ಹರೀಶ್ ಪೂಂಜಾ ಅವರು ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿಸಿದ್ದಾರೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಶಾಸಕರು ಮಾಡಿರುವ ಅಪಾದನೆ ಬಗ್ಗೆ ತಕ್ಷಣ ಸುಮೋಟೋ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಅವರ ಮೇಲಿರುವ ಹತ್ಯೆ ಆರೋಪ ನಿಜವಾದಲ್ಲಿ ತಕ್ಷಣ ಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಒಂದು ವೇಳೆ ಶಾಸಕ ಪೂಂಜಾ ಸುಳ್ಳು ಆರೋಪ ಮಾಡಿದ್ದರೆ ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ” ಎಂದು ಸವಾಲ್ ಹಾಕಿದ್ದಾರೆ.

ಸಾಮಾಜದ ಮದ್ಯೆ ಸುಳ್ಳು ಹೇಳಿಕೆ ನೀಡಿ ಸಮಾಜದ ಒಡೆಯುವ ಕೆಲಸ ಮಾಡಿದ ಶಾಸಕರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಂಘಟನೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version