ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರಿಂದ ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ನಡೆಗೆ” ಎಂಬ ಬೃಹತ್ ಪಾದಯಾತ್ರೆ ಹಾಗೂಸೇವಾ ಸಮರ್ಪಣಾ ಕಾರ್ಯಕ್ರಮ” ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಮಾರುಗದ್ದೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ `ಪುತ್ತಿಲ ಪರಿವಾರ’ ಸಂಘಟನೆಯ ಲಾಂಚನ ಬಿಡುಡೆಗೊಳಿಸಲಾಯಿತು.
ದರ್ಬೆಯಲ್ಲಿ ಚಾಲನೆ ಪಡೆದುಕೊಂಡ ಕಾಲ್ನಡಿಗೆ ಜಾಥಾ, ಮುಖ್ಯರಸ್ತೆಯಾಗಿ ಸಾಗಿ ದೇವಸ್ಥಾನದ ದೇವರಮಾರು ಗದ್ದೆಗೆ ಆಗಮಿಸಿತು. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಮಂದಿ ಜಾಥಾದಲ್ಲಿ ಬರಿಗಾಲಲ್ಲಿ ನಡೆದುಕೊಂಡು ಬಂದರು. ಜಾಥಾದ ಉದ್ದಕ್ಕೂ ಓಂ ನಮಃ ಶಿವಾಯ ಮಂತ್ರ ಪಠಣ ಕೇಳಿಬರುತ್ತಿದ್ದು ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಜಾಥಾದಲ್ಲಿ ಪಾಲ್ಗೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ದೈವಬಲದ ಕಾರಣಕ್ಕೆ ಪುತ್ತಿಲ ಅವರಿಗೆ ಈ ರೀತಿಯಾದ ಜನರ ಪ್ರೀತಿ ಬೆಂಬಲ ಸಿಕ್ಕಿದೆ. ಅಭ್ಯರ್ಥಿಗಳು ಹಣ ಹಂಚುವ ಈ ದಿನಗಳಲ್ಲಿ ಮತದಾರರೇ ಹಣ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪುತ್ತಿಲ ಅವರು ಹಲವು ಇತಿಹಾಸವನ್ನು ಸೃಷ್ಠಿಸಿದ್ದಾರೆ. ಇದೀಗ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆಯನ್ನು ಆರಂಭಿಸಲಾಗಿದ್ದು ಹಿಂದೂ ಸಂಘಟನೆ ಒಡೆದು ಹೋಗಬಾರದು ಎಂಬ ನಿಟ್ಟಿನಲ್ಲಿ ಈ ಸಂಘಟನೆ ಕಾರ್ಯೋನ್ಮುಖವಾಗಲಿದೆ. ಸಂಘಟನೆ ಒಡೆದಿದ್ದಾರೆ ಎನ್ನುವವರಿಗೆ ಸಂಘಟನೆ ಕಟ್ಟಿ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ ನಾಯಕರು ಮಾಡಿದ ತಪ್ಪು ನಿರ್ಧಾರದಿಂದಾಗಿ ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕಾದ ನಾವು ಶಕ್ತಿ ಕಳೆದುಕೊಂಡೆವು. ನನ್ನಲ್ಲಿ ಎಂದೂ ಜಾತಿ ಇಲ್ಲ. ಇರುವುದು ಹಿಂದುತ್ವ ಮಾತ್ರ. ಆಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿಲ್ಲ. ಆದರೂ ನನ್ನ ಬಗ್ಗೆ ಹಲವಾರು ಅಪಮಾನ, ಅಪವಾದಗಳನ್ನು ಮಾಡಿದರು. ಅವರಿಗೆ ಶ್ರೀ ಮಹಾಲಿಂಗೇಶ್ವರ ಉತ್ತರ ನೀಡಲಿದ್ದಾನೆ. ಚುನಾವಣೆಯಲ್ಲಿ ನಾನು ಸೋತ್ತಿದ್ದರೂ ಕಾರ್ಯಕರ್ತರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ಸ್ಪರ್ಧೆಯ ಮೂಲಕ ದೇಶಕ್ಕೆ ಬದಲಾವಣೆಯ ಚಿಂತನೆ ನೀಡಿದ್ದೇನೆ ಎಂದು ಹೇಳಿದರು.
ಪ್ರಸನ್ನ ಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ರಾಜಶೇಖರ್ ಬನ್ನೂರು, ವಸಂತ ಲಕ್ಷ್ಮೀ, ಡಾ. ಗಣೇಶ್ ಪ್ರಸಾದ್ ಮುದ್ರಜೆ, ಉಮೇಶ್ ಕೋಡಿಬೈಲು ಉಪಸ್ಥಿತರಿದ್ದರು.