ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ
ಕೊಪ್ಪಳ ಮೇ 15 (ಕರ್ನಾಟಕ ವಾರ್ತೆ): ಬೇಸಿಗೆಯ ಅವಧಿ ಮುಕ್ತಾಯದವರೆಗೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದರು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯ ಕುರಿತು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಹಾಲನಲ್ಲಿ ಮೇ 15ರ ಸಂಜೆ ನಡೆದ ಜಿಲ್ಲಾಮಟ್ಟದ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಮಟ್ಟದಲ್ಲಿ ಸಭೆಗಳು ನಡೆದ ಹಾಗೆ ತಾಲೂಕುಮಟ್ಟದಲ್ಲಿ ಸಹ ತಾಲೂಕು ಮಟ್ದದ ಟಾಸ್ಕಪೋರ್ಸ್ ಸಭೆಗಳನ್ನು ನಡೆಸಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆಯಾ ತಾಲೂಕಿನ ತಹಸೀಲ್ದಾರ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿರಂತರವಾಗಿ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿಕೊಳ್ಳುವುದರ ಜತೆಗೆ ಆ ನೀರು ಬಳಕೆಗೆ ಯೋಗ್ಯವಾಗಿದೆಯೋ ಇಲ್ಲೋ ಎಂಬುದನ್ನು ತಿಳಿದುಕೊಂಡು ಬಳಿಕವಷ್ಟೇ ಉಪಯೋಗಿಸಲು ಕ್ರಮ ವಹಿಸಬೇಕು. ಬೋರವೆಲ್‌ಗಳ ಮೇಲೆ ಅವಲಂಬಿತವಾಗಿರುವ ಗ್ರಾಮ ಮತ್ತು ವಾರ್ಡವಾರು ಮಾಹಿತಿ ಇಟ್ಟುಕೊಂಡಿರಬೇಕು. ಗ್ರಾಮೀಣ ಪ್ರದೇಶದಲ್ಲಿ ತಾಂಡಾ ಮತ್ತು ಬೇಚಾರಕ ಗ್ರಾಮಗಳಲ್ಲಿ ಬೋರವೆಲ್‌ಗಳು ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ಆಯಾ ಕಡೆಗಳಲ್ಲಿನ ಬೋರವೆಲ್‌ಗಳನ್ನು ಮತ್ತು ಓವರ್ ಹೆಡ್ ಟ್ಯಾಂಕಗಳನ್ನು ಸುಸ್ಥಿಯಲ್ಲಿಡಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಸರಬರಾಜು ಮಾಡುವ ಹಳ್ಳ, ಕೆರೆ, ಕಾಲುವೆ ಮತ್ತು ಡ್ಯಾಮಗಳಲ್ಲಿನ ನೀರನ್ನು ಕಾಲಕಾಲಕ್ಕೆ ಪರೀಕ್ಷಿಸಿ ಪೂರೈಸಲು ಮತ್ತು ಹಳ್ಳ, ಕೆರೆ, ಕಾಲುವೆ ಮತ್ತು ಡ್ಯಾಂಗಳ ಸುತ್ತಲಿನ ಪ್ರದೇಶದ ಶುಚಿತ್ವಕ್ಕೆ ಸಹ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದರು. ನೀರು ಮತ್ತು ನೀರಿನ ಮೂಲ ಲಭ್ಯವಿದ್ದು ಆದರೆ ನೀರು ಸರಬರಾಜು ಪೂರೈಕೆಗೆ ವಿದ್ಯುತ್ ಸೌರ್ಯವಿಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ನಿರಂತರ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ಜೆಸ್ಕಾಂ ಅಭಿಯಂತರರಿಗೆ ಸೂಚಿಸಿದರು. ಜನರ ಅಪೇಕ್ಷೆಯನುಸಾರ ಆಯಾ ಕಡೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಗಮನ ಹರಿಸಬೇಕು. ರಿಪೇರಿ ಸಾಧ್ಯತೆ ಇರುವ ಘಟಕಗಳನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಬೇಕು. ಜೆಜೆಎಂ ಮತ್ತು ಡಿಬಿಓಟಿ ಮೂಲಕವೇ ಜನತೆಗೆ ನೀರು ಪೂರೈಸಲು ಹೆಚ್ಚಿನ ಗಮನ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 33 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದ್ದು, ಕಾರಟಗಿ, ಗಂಗಾವತಿ ಮತ್ತು ಕೊಪ್ಪಳ ತಾಲೂಕುಗಳಲ್ಲಿ 50 ಸಾವಿರ ಎಕರೆಯಲ್ಲಿ ಭತ್ತದ ಕಟಾವು ಆಗಿದ್ದು ಭತ್ತದ ಮೇವು ಸಹ ಸಾಕಷ್ಟು ಲಭ್ಯವಿರುತ್ತದೆ. ಸದ್ಯಕ್ಕೆ ಮೇವಿನ ಕೊರತೆ ಇರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ವಿವಿಧ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.