ಜೂಮ್ ಪ್ಲಸ್

ಮತದಾನ ಶಾಂತಿಯುತ; ಅಂದಾಜು ಶೇ.78ರಷ್ಟು ಮತದಾನ ಪ್ರಮಾಣ ದಾಖಲು:ಎಂ.ಸುಂದರೇಶಬಾಬು

Published

on

ಕರ್ನಾಟಕ ವಿಧಾನಸಭೆ ಚುನಾವಣೆ-2023

ಕೊಪ್ಪಳ ಮೇ 10 (ಕ.ವಾ.): ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆವರೆಗೆ ಮತದಾನವು ಶಾಂತಯುತವಾಗಿ ನಡೆದಿದ್ದು, ಬೆಳಗ್ಗೆ 7 ರಿಂದ ಮತದಾನ ಮುಕ್ತಾಯದವರೆಗೆ ಜಿಲ್ಲೆಯಲ್ಲಿ ಅಂದಾಜು ಶೇ.78 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾನದ ಪ್ರಮಾಣವು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಶೇ.7.64 ರಷ್ಟು., 11 ಗಂಟೆಯವರೆಗೆ ಶೇ.21.46 ರಷ್ಟು., ಮಧ್ಯಾಹ್ನ 1 ಗಂಟೆಯವರೆಗೆ ಶೇ.39.94 ರಷ್ಟು., ಮಧ್ಯಾಹ್ನ 3 ಗಂಟೆಯವರೆಗೆ ಶೇ.56.45 ರಷ್ಟು., ಸಂಜೆ 5 ಗಂಟೆಯವರೆಗೆ ಶೇ.70.49 ರಷ್ಟು ದಾಖಲಾಗಿದ್ದು, ಮತದಾನ ಮುಕ್ತಾಯದ ನಂತರ ಅಂದಾಜು ಶೇ.78 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. (ಮತಗಟ್ಟೆವಾರು ಮತದಾನ ಪ್ರಮಾಣದ ಅಂಕಿ ಅಂಶಗಳ ಸೇರ್ಪಡೆ ಪ್ರಕ್ರಿಯೆ ಇನ್ನು ಸಹ ಮುಂದುವರೆದಿದ್ದು ಅಂತಿಮವಾದ ಶೇಕಡಾವಾರು ಮಾಹಿತಿಯನ್ನು ಬಳಿಕ ತಿಳಿಸಲಾಗುತ್ತದೆ.)
ಎಲ್ಲಾ 5 ವಿಧಾನಸಭಾ ಕ್ಷೇತ್ರಗಳ 1322 ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಜಿಲ್ಲೆಯಲ್ಲಿ ಮತದಾನವು ಮುಕ್ತ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರಿಂದ ಮತದಾನ ಪ್ರಕ್ರಿಯೆಯು ಶಾಂತರೀತಿಯಿಂದ ಮುಕ್ತಾಯಗೊಂಡಿದೆ.
ಸಾರ್ವಜನಿಕರಿಂದ ಮೆಚ್ಚುಗೆ: ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬಂದು ಓಟು ಮಾಡಬೇಕು ಎನ್ನುವ ದಿಶೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಲಿ ಕಲೆ, ಕಿನ್ನಾಳ ಕಲೆ, ತಳಿರು ತೋರಣಗಳು, ಬಲೂನಗಳು, ರಂಗೋಲಿ ಮೂಲಕ ವಿಶೇಷವಾಗಿ ರೂಪಿಸಿದ್ದ 50 ವಿಶೇಷ ಮತಗಟ್ಟೆಗಳ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ತಂಡಗಳ ನೋಡಲ್ ಅಧಿಕಾರಿಗಳು, ಎಂಸಿಸಿ., ಎಫ್‌ಎಸ್‌ಟಿ, ವಿಎಸ್‌ಟಿ, ಎಂಸಿಎಂಸಿ, ವಿವಿಟಿ ಸೇರಿದಂತೆ ಚುನಾವಣೆ ಹಿನ್ನೆಲೆಯಲ್ಲಿ ನಾನಾ ರೀತಿಯ ಕರ್ತವ್ಯದಲ್ಲಿದ್ದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version