ಜೂಮ್ ಪ್ಲಸ್

ಶರಣರ ಸತ್ಸಂಗದಿಂದ ಅಜ್ಞಾನ ದೂರ

Published

on


ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 78 ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕುರಿತ ಪ್ರಾಸ್ತಾವಿಕ ಮಾತನಾಡಿದ ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ ಇವರು ಮಾತನಾಡಿ, “ನಡೆಯೊಳಗೆ ನುಡಿ ತುಂಬಿ, ನುಡಿಯೊಳಗೆ ನಡೆ ತುಂಬಿ, ನಡೆ ನುಡಿ ಎರಡನ್ನು ಪರಿಪೂರ್ಣತೆಯಿಂದ ತುಂಬಿಕೊಂಡು ಲಿಂಗವ ಕೂಡಬಲ್ಲಾತ’ ಮಾತ್ರ ಶರಣನಾಗುತ್ತಾನೆ. ಸದಾಚಾರದ ಇನ್ನೊಂದು ವ್ರತ, ಸತ್ಯನಿಷ್ಠೆ.
ಸತ್ಯವೇ ಶಿವನ ಆವಾಸಸ್ಥಾನ. “ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ, ಅಸತ್ಯದ ಮನೆಯಲ್ಲಿ ಶಿವನಿರ್ಪನೇ?” ಎಂದು ಕೇಳುತ್ತಾರೆ ಶರಣರು. ಒಬ್ಬರ ಮನವ ನೋಯಸಿ ಒಬ್ಬರ ಮನೆಯ ಘಾತವ ಮಾಡಿ ಗಂಗೆಯಲ್ಲಿ ಮುಳುಗಿದರೆ ಆಗುವದೇನಯ್ಯ ?” ಎನ್ನುತ್ತಾರೆ ಶರಣರು. ಪರರ ಮನಸ್ಸನ್ನು ನೋಯಿಸಿ ಅವರಿಗೆ ಕೆಡಕನ್ನು ಬಯಿಸಿ ಅನ್ಯಾಯ, ಅಸತ್ಯದ ಕಾಯಕದಿಂದ ಬಂದ ರತ್ನಖಚಿತ ಚಿನ್ನದ ಕಾಣಿಕೆಗಳನ್ನು ಕೊಟ್ಟು ಆಡಂಬರದ ಪೂಜೆ ಮಾಡಿದರೆ ಪರಶಿವನ ಅನುಗ್ರಹ ಸಾಧ್ಯವಿಲ್ಲ. ಶುದ್ಧ ಕಾಯಕದಿಂದ ಬಂದ ಕಾರೆ ಸೊಪ್ಪಾದರೂ ಸರಿ, ಅದು ಶಿವನಿಗೆ ಅರ್ಪಿತವಾಗುತ್ತದೆ. ಸತ್ಯಶುದ್ಧ ಕಾಯಕ, ಸಕಲಪ್ರಾಣಿಗಳಲ್ಲಿ ದಯಾ ಭಾವನೆ, ಭಾವಶುದ್ಧಿ, ಅರಿವು, ತ್ರಿಕರಣ ಶುದ್ಧಿ(ದೇಹ, ಮನಸ್ಸು, ಮಾತಿನ ಶುದ್ಧಿ), ನುಡಿದಂತೆ ನಡೆ ಇಂತಹ ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಂಡು, ಅಂಗದ ಮೇಲೆ ಲಿಂಗ ಧರಿಸಿ, ಪರಶಿವನನ್ನು ಪೂಜಿಸಿದರೆ ಮಾತ್ರ ಪರಶಿವನ ಒಲುಮೆ ಕೃಪೆ ಸಾಧ್ಯ ಆಗುತ್ತದೆ ಎಂದು ನುಡಿದರು. ನಂತರ ಮಾತನಾಡಿದ ಶರಣ ಅಮರೇಶಪ್ಪ ಗಡಿಹಳ್ಳಿ ಇವರು ಮಾತನಾಡಿ,
ಗುರು ಬಸವಣ್ಣನವರು ಶರಣರ ಅನುಭಾವದ ಮತ್ತು ಸತ್ಸಂಗದ ಮಹತ್ವ ಅದರಿಂದ ಭವ ಹೇಗೆ ನಾಶವಾಗುವುದು ಎಂದು ಸುಂದರ ರೂಪಕಗಳ ಮೂಲಕ ವಿವೇಚಿಸಿ ತಿಳಿಸುತ್ತಾರೆ.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ ಎನ್ನುವ ವಚನದ ಮೂಲಕ ಜೀವನದ ಮೌಲ್ಯಗಳನ್ನ ತಿಳಿಸಿದ್ದಾರೆ.
ಜ್ಞಾನದ ಬಲದಿಂದ ಅಜ್ಞಾನ ನಾಶವಾಗುತ್ತದೆ. ಅಂಧಕಾರವನ್ನು ನಿವಾರಿಸುವ ಸುಲಭ ಉಪಾಯವೆಂದರೆ ಜ್ಯೋತಿಯನ್ನು ಬೆಳಗಿಸುವದು. ಹೀಗೆ ಜ್ಯೊತಿಯ ಬಲದಿಂದ ಕತ್ತಲೆಯು ಇಲ್ಲವಾಗುತ್ತದೆ. ಇದೇ ರೀತಿ ಸತ್ಯವು ಬೆಳಕಿಗೆ ಬಂದಾಗ ಅಸತ್ಯವು ಅಳಿದುಹೋಗುತ್ತದೆ. ಪರುಷ ಮಣಿಯ ಸ್ಪರ್ಶದಿಂದ ಅವಲೋಹವು ಕೂಡ ತನ್ನ ಅವಲೋಹತ್ವವನ್ನು ಕಳೆದುಕೊಂಡು ಚಿನ್ನವಾಗುತ್ತದೆ. ಮುಂದುವರೆದು ಹೇಳುತ್ತಾರೆ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
ಹೇಗೆ ಜ್ಞಾನದಿಂದ ಅಜ್ಞಾನ, ಜ್ಯೋತಿಯಿಂದ ಕತ್ತಲೆ, ಸತ್ಯದಿಂದ ಅಸತ್ಯ ಮತ್ತು ಪರುಷಗಳ ಬಲದಿಂದ ಅವಲೋಹಗಳು ನಾಶವಾಗುತ್ತವೆಯೋ ಹಾಗೆಯೇ ಅನುಭಾವಿ ಶರಣರ ಒಡನಾಟ, ಅವರ ಅನುಭಾವದ ನುಡಿಗಳಿಂದ ಅವರ ಸತ್ಸಂಗದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲವಾಗುತ್ತವೆ. ಹೀಗೆ ಭವ ಅಂದರೆ ಹುಟ್ಟು ಸಾವುಗಳ ಚಕ್ರದಲ್ಲಿ ಸಿಲುಕಿರುವ ಲೌಕಿಕ ಮನುಷ್ಯ ಜೀವನ ನಾಶವಾಗಿ, ಅನುಭಾವದ ಬೆಳಕು ಕಾಣಿಸಿ ಜ್ಞಾನದ ಜ್ಯೋತಿ ಪ್ರಕಾಶಮಾನ ವಾಗುತ್ತದೆ. ಸದಾ ಪ್ರಾಪಂಚಿಕ ವಿಷಯಗಳಲ್ಲಿ ಮುಳುಗುವುದನ್ನು ತಪ್ಪಿಸುತ್ತದೆ ಎಂದು ಗುರು ಬಸವಣ್ಣನವರು ಜನ ಸಮುದಾಯಕ್ಕೆ ವಚನ ಸಾಹಿತ್ಯದ ಮೂಲಕ ನೀಡಿದ್ದಾರೆ, ಅವುಗಳನ್ನು ನಾವು ನೀವೆಲ್ಲರೂ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಹನಮಗೌಡ ಬಳ್ಳಾರಿ ಮತ್ತು ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ ಮಾತನಾಡಿದರ.ಕಾರ್ಯಕ್ರಮದಲ್ಲಿ ಪ್ರಮುಖರಾದ, ನಾಗನಗೌಡ ಜಾಲಿಹಾಳ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರು ಮಾಟಲದಿನ್ನಿ, ಪುರುಷೋತ್ತಮ ಅರಳಹಳ್ಳಿ, ದೇವಪ್ಪ ಕೋಳೂರು ಸಾ.ವನಜಭಾವಿ,ಇವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ ಹೂಗಾರ, ಲಿಂಗನಗೌಡ ದಳಪತಿ, ಬಸಣ್ಣ ಹೊಸಳ್ಳಿ, ಶಿವಪುತ್ರಪ್ಪ ಉಚ್ಚಲಕುಂಟಿ, ಜಗದೀಶ್ ಮೇಟಿ, ಪಂಪಣ್ಣ ಹೊಸಳ್ಳಿ, ಹನಮೇಶ್ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ರಾಷ್ಟ್ರಪತಿ ಹೊಸಳ್ಳಿ, ಪಕೀರಪ್ಪ ಮಂತ್ರಿ, ನಿಂಗಪ್ಪ ವಿರುಪಣ್ಣ ಮಂತ್ರಿ, ಮಲ್ಲೇಶಪ್ಪ ಟೈಲರ್ ಮಾಟಲದಿನ್ನಿ, ದೇವೇಂದ್ರಪ್ಪ ಆವಾರಿ, ಶಾಂತಕುಮಾರ ಹೊಸಳ್ಳಿ, ಬಸವರಾಜ ಕೋಳೂರು, ಮಲ್ಲಿಕಾರ್ಜುನ ಮಂತ್ರಿ ಸೇರಿದಂತೆ ಅಕ್ಕ ನಾಗಲಾಂಬಿಕೆ ಬಳಗದ ಶರಣೆಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ದಾಸೋಹ ಸೇವೆ ಗೈದ
ಶ್ರೀ ಮತಿ ದೇವಮ್ಮ ಗಂಡ ಶರಣಪ್ಪ ಉಚ್ಚಲಕುಂಟಿ ಇವರನ್ನ ಸನ್ಮಾನಿಸಲಾಯಿತು, ಬಸವರಾಜ ಹೂಗಾರ ನಿರೂಪಿಸಿದರು.
✍️ ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣಗ್ರಾಮ ಗುಳೆ

Leave a Reply

Your email address will not be published. Required fields are marked *

Trending

Exit mobile version