ಜೂಮ್ ಪ್ಲಸ್

ಅಗತ್ಯ ಸೇವೆಗಳಡಿಯ ಮತದಾರರಿಗೆ ಮೇ 2ರಿಂದ‌ ಮೇ 4ರವರೆಗೆ ಮತದಾನಕ್ಕೆ ಅವಕಾಶ

Published

on

ಕೊಪ್ಪಳ ಮೇ 01 (ಕ.ವಾ.):
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ಹಿನ್ನಲೆಯಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ಅಡಿ ಬರುವ ಮತದಾರರಿಗೆ
ಮೇ 02 ರಿಂದ ಮೇ 04ರವರೆಗೆ
ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಜಿಲ್ಲೆಯ ಎಲ್ಲಾ 05 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳಾದ ವಿದ್ಯುತ್, ಬಿ.ಎಸ್.ಎನ್.ಎಲ್, ರೈಲ್ವೆ, ದೂರದರ್ಶನ, ರೇಡಿಯೋ, ಆರೋಗ್ಯ ಇಲಾಖೆ, ವಿಮಾನಯಾನ, ಸಾರಿಗೆ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ಇಲಾಖೆ, ಮಾಧ್ಯಮ (ಭಾರತ‌‌‌ ಚುನಾವಣಾ ಆಯೋಗದಿಂದ ಅನುಮೋದಿತ)., ಟ್ರಾಫಿಕ್ ಪೊಲೀಸ್ ಮತ್ತು ಅಂಬ್ಯುಲೆನ್ಸ್ ಸೇವೆ ಒದಗಿಸುವ ಸಿಬ್ಬಂದಿಯು ಮತದಾನದಿಂದ ವಂಚಿತರಾಗಬಾರದೆಂದು ಭಾರತ ಚುನಾವಣಾ ಆಯೋಗವು ಅಂಚೆಯ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿರುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಚುನಾವಣಾಧಿಕಾರಿಗಳು ಅರ್ಹ ಮತದಾರರಿಂದ ಅಂಚೆ ಮತ ಪತ್ರಕ್ಕಾಗಿ ಕೋರಿಕೆ ಪಡೆದಿರುತ್ತಾರೆ. ಅದರಂತೆ ಈ ಸಿಬ್ಬಂದಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ (ಪಿ.ವಿ.ಸಿ) ಯನ್ನು ತೆರೆಯಲಾಗಿದೆ. ಈ ವಿಭಾಗದಲ್ಲಿ ನೋಂದಾಯಸಿರುವ ಮತದಾರರು ಈ ಪಿವಿಸಿ ಕೇಂದ್ರಗಳಿಗೆ ತೆರಳಿ ಮತದಾನವನ್ನು ಮಾಡಬಹುದಾಗಿದೆ. ಮೇ. 02 ರಿಂದ ಮೇ 04 ರವರೆಗೆ ಪ್ರತೀ ದಿನ ಬೆಳಿಗ್ಗೆ 09 ರಿಂದ ಸಂಜೆ 05ರವರಗೆ ಪಿ.ವಿ.ಸಿ ಕೇಂದ್ರಗಳಲ್ಲಿ ಮತದಾನವು ನಡೆಯಲಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಈ ವಿಭಾಗದ ಅಂಚೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಈ ವಿಭಾಗದಲ್ಲಿ ನೋಂದಾಯಿತರಾದ ಮತದಾರರು, ನಿಗದಿಪಡಿಸಿದ ದಿನಾಂಕಗಳಲ್ಲಿ ಯಾವುದಾದರೂ ಒಂದು ದಿನ ವಿಧಾನಸಭಾವಾರು ತರೆಯಲಾಗಿರುವ ಪಿ.ವಿ.ಸಿ ಕೇಂದ್ರಗಳಿಗೆ ತೆರಳಿ ಮತದಾನ ಮಾಡಬಹುದಾಗಿದೆ. ‘ಮತದಾನಕ್ಕಿಂತ ಮತ್ತೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಭಾರತ ಚುನಾವಣಾ ಆಯೋಗದ ಘೋಷವಾಕ್ಯದಂತೆ ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸೇವೆಯಲ್ಲಿ ಕಾರ್ಯನಿರತರಾದ ಈ ನೋಂದಾಯಿತ ಮತದಾರರು ಪಿವಿಸಿ ಕೇಂದ್ರಗಳ ಮುಖಾಂತರ ಅಂಚೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳು ಕೋರಿರುತ್ತಾರೆ.

Leave a Reply

Your email address will not be published. Required fields are marked *

Trending

Exit mobile version