ಬೆಂಗಳೂರು;ದೆಹಲಿಯಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ನಡೆಯುತ್ತಿದ್ದು 27ರ ಶನಿವಾರ 24 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ.
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ 10 ಮಂದಿ ಸಂಪುಟದಲ್ಲಿದ್ದು, 34 ಸದಸ್ಯ ಬಲದ ಸಂಪುಟದಲ್ಲಿ ಹಾಲಿ 24 ಸ್ಥಾನಗಳು ಖಾಲಿ ಇವೆ. ಸಚಿವ ಸಂಪುಟ ಸೇರ್ಪಡೆಗೆ ಕಸರತ್ತಿನ ಬೆನ್ನಲ್ಲೇ 24 ಸ್ಥಾನಗಳಿಗೂ ಸಚಿವರ ನೇಮಕ ನಡೆಯಲಿದೆ ಎನ್ನಲಾಗಿದೆ.
ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ 24 ಹೆಸರುಗಳ ಬಗ್ಗೆ ಮೇಲಿಂದ ಮೇಲೆ ತೀರ್ಮಾನವಾಗಿದ್ದರೂ, ಖಾತೆ ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಪ್ರಭಾವಿ ಖಾತೆಗಳಿಗಾಗಿ ಸಿದ್ದು ಹಾಗೂ ಡಿಕೆಶಿ ಬಣದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸರಣಿ ಸಭೆ ನಡೆಸಿದ್ದಾರೆ.ಸಂಪುಟ ಸೇರ್ಪಡೆ ಕಸರತ್ತಿನ ನಡುವೆ ಕೆಲ ಹಿರಿಯರಿಗೆ ಅವಕಾಶ ತಪ್ಪಿದೆ ಎನ್ನಲಾಗಿದೆ.ಆರ್.ವಿ. ದೇಶಪಾಂಡೆ, ಜಯಚಂದ್ರ, ಬಿ.ಕೆ. ಹರಿಪ್ರಸಾದ್ ಹಾಗೂ ಎಚ್.ಕೆ. ಪಾಟೀಲ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗುತ್ತಾ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.