ZOOMKARNATAKA 8/9/2024 ಮಂಗಳೂರು: ನಗರದ ಪ್ರಸಿದ್ಧ ಶ್ರೀಕ್ಷೇತ್ರ ಕುಡುಪುವಿನಲ್ಲಿ ಸಂಭ್ರಮ, ಸಡಗರದಿಂದ ನಾಗರಪಂಚಮಿ ಆಚರಿಸಲಾಯಿತು. ಸಾವಿರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಅರ್ಪಿಸಿರುವ ಹಾಲು, ಸೀಯಾಳದಿಂದ ನಾಗನಿಗೆ ತನು ಎರೆಯಲಾಯಿತು.
ಸಾವಿರ ಸಾವಿರ ಮಂದಿ ಮಹಿಳೆಯರು, ಭಕ್ತರು ಶ್ರೀಕ್ಷೇತ್ರ ಕುಡುಪುವಿಗೆ ಆಗಮಿಸಿ ನಾಗನಿಗೆ ಹಾಲು – ಸೀಯಾಳ ಅರ್ಪಿಸಿದರು. ತುಳುನಾಡು ಹಿಂದಿನಿಂದಲೂ ನಾಗರಖಂಡವೆಂದು ಪ್ರಸಿದ್ಧಿಹೊಂದಿದೆ. ಅವೈದಿಕ ತುಳುವರು ನಾಗರಕಲ್ಲುಹಾಕಿ ನಾಗನಿಗೆ ತನು ಎರೆದು ಭಕ್ತಿಯಿಂದ ನಡೆದುಕೊಳ್ಳುವುದನ್ನು ಅನಾದಿ ಕಾಲದಿಂದಲೂ ರೂಢಿಸಿಕೊಂಡು ಬಂದವರು.
ಈಗಲೂ ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ನಾಗರಪಂಚಮಿ ಹೆಂಗಸರ ಹಬ್ಬ. ಪಂಚಮಿಯ ದಿನ ಎಲ್ಲರೂ ಶುದ್ಧಾಚಾರ ಪಾಲಿಸಿ ತಮ್ಮ ಕುಟುಂಬ ಮೂಲ ನಾಗಬನಕ್ಕೆ ಹೋಗಿ ನಾಗನಿಗೆ ತನು ಎರೆಯುತ್ತಾರೆ. ಮೂಲ ನಾಗಬನ ಇಲ್ಲದವರು ಶ್ರೀ ಕುಡುಪು ಕ್ಷೇತ್ರದಲ್ಲಿ ನಾಗನಿಗೆ ಹಾಲೆರೆಯುತ್ತಾರೆ.
ನಾಗರಪಂಚಮಿ ದಿನ ನಾಗನಕಲ್ಲನ್ನು ಶುದ್ಧ ನೀರಿನಿಂದ ತೊಳೆದು, ಹಾಲು ಸೀಯಾಳದ ಅಭಿಷೇಕ ಮಾಡಲಾಗುತ್ತದೆ. ಕಲ್ಲಿಗೆ ಅರಶಿಣ ಹಚ್ಚಿ, ನಾಗನಿಗೆ ಪ್ರಿಯವಾದ ಕೇದಗೆ, ಸಂಪಿಗೆ, ಅಡಿಕೆ ಹೂವಿನಿಂದ ಅಲಂಕರಿಸಲಾಗುತ್ತದೆ. ಬಳಿಕ ಅರಳು, ಬೆಲ್ಲ, ಬಾಳೆಯಹಣ್ಣಿನ ನಾಗತಂಬಿಲ ಅರ್ಪಿಸಲಾಗುತ್ತದೆ. ತನು ಅರ್ಪಿಸುವುದೆಂದರೆ ತಂಪು ಮಾಡುವುದೆಂದು ಅರ್ಥ. ಇಲ್ಲಿ ನಾಗರಕಲ್ಲಿಗೆ ಅರ್ಪಿಸಿದ ಹಾಲು ಸೀಯಾಳ ಭೂಮಿಯ ಒಡಲು ಸೇರಿ ತಂಪು ಮಾಡುತ್ತದೆ. ಜೊತೆಗೆ ಮಳೆ ನೀರಿನೊಂದಿಗೆ ಹಾಲು – ಸೀಯಾಳ ಕಡಲು ಸೇರುತ್ತದೆ. ಆದ್ದರಿಂದ ನಾಗರಪಂಚಮಿಯ ಬಳಿಕ ಮೀನುಗಾರಿಕೆ ಮೆಲ್ಲನೇ ಆರಂಭವಾಗುತ್ತದೆ. ಮಳೆಗಾಲದಲ್ಲಿ ತಾತ್ಕಾಲಿಕ ಸ್ಥಗಿತವಾದ ಮೀನುಗಾರಿಕೆ ಮರು ಆರಂಭಕ್ಕೆ ನಾಗರಪಂಚಮಿ ಗಡುವು ಹೌದು.