ನವದೆಹಲಿ:ಪಾಕ್ ಜತೆ ನಂಟು ಹೊಂದಿದ್ದ 14 ವಿದೇಶಿ ಮೊಬೈಲ್ ಮೆಸೆಂಜರ್ ಆ್ಯಪ್‌ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಭಯೋತ್ಪಾದಕ ಗುಂಪುಗಳ ಜತೆಗೆ ಸಂದೇಶ ಹಂಚಿಕೊಳ್ಳುತ್ತಿದ್ದ ಮಾಹಿತಿಯ ಮೇರೆಗೆ ಕೇಂದ್ರ ಸರ್ಕಾರ ಸೋಮವಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಬಳಕೆಯಲ್ಲಿದ್ದ ಈ ನಿಷೇಧಿತ ಆ್ಯಪ್‌ಗಳು ದೇಶ ವಿರೋಧಿ ಶಕ್ತಿಗಳ ಜತೆ ನಂಟು ಹೊಂದಿದ್ದನ್ನು ರಕ್ಷಣಾ ಪಡೆಗಳು, ಭದ್ರತೆ, ಗುಪ್ತಚರ ಮತ್ತು ತನಿಖಾ ಸಂಸ್ಥೆಗಳು ಪತ್ತೆ ಮಾಡಿದ್ದವು.
ಕ್ರಿಪ್‌ವೈಸರ್, ಎನಿಗ್ಮಾ, ಸೇಫ್‌ಸ್ವಿಸ್, ವಿಕ್ರಿಮೆ, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂದ್ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಂಗಿ, ಥ್ರೀಮಾ ಸೇರಿದಂತೆ 14 ಅಪ್ಲಿಕೇಶನ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ-2000 ರ ಸೆಕ್ಷನ್ 69A ಅಡಿಯಲ್ಲಿ ನಿಷೇಧಿಸಲಾಗಿದೆ.
ಈ ಆ್ಯಪ್‌ಗಳು ಭಾರತದಲ್ಲಿ ಯಾವುದೇ ಕಚೇರಿಯನ್ನು ಹೊಂದಿರಲಿಲ್ಲ. ಈ ಆ್ಯಪ್‌ಗಳನ್ನು ಪಾಕಿಸ್ತಾನಿ ಭಯೋತ್ಪಾದಕರು ತಮ್ಮ ಬೆಂಬಲಿಗರು ಮತ್ತು ಕಾಶ್ಮೀರದಲ್ಲಿರುವ ತಮ್ಮ ಏಜೆಂಟರ ಜತೆ ಸಂವಹನ ನಡೆಸಲು ಬಳಕೆ ಮಾಡುತ್ತಿದ್ದರು ಎಂದು ಭದ್ರತಾ ಏಜೆನ್ಸಿಗಳು ಬಯಲಿಗೆಳೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಆ್ಯಪ್‌ಗಳನ್ನು ನಿಷೇಧಿಸಿದೆ.