Connect with us

ಜೂಮ್ ಪ್ಲಸ್

ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾದ 20 ಅಂಶಗಳೇನು ಗೊತ್ತೆ?

Published

on



ಬೆಂಗಳೂರು, ಮೇ.13: ರಾಜ್ಯ ವಿಧಾನಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಇನ್ನೇನು ಬಿಡುಗಡೆಯಗಲಿದೆ. ಈಗಾಗಲೇ ಕಾಂಗ್ರೆಸ್ ಪೂರ್ಣ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಆದರೆ, ಚುನಾವಣಾ ಆಯೋಗದ ಅಧಿಕೃತ ಘೋಷಣೆಯೊಂದು ಬಾಕಿಯಿದೆ. ಈ ಭರ್ಜರಿ ಗೆಲುವನ್ನು ಕಾಂಗ್ರೆಸ್ ಕೂಡ ನಿರೀಕ್ಷೆ ಮಾಡಿರಲಿಲ್ಲ ಎನಿಸುತ್ತದೆ. ಆಡಳಿತರೂಢ ಬಿಜೆಪಿ 132 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, 62 ಸ್ಥಾನಗಳನ್ನೂ ದಾಟಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯಾದ್ಯಂತ ರಾಷ್ಟ್ರೀಯ ನಾಯಕರು, ಬಿಜೆಪಿಯ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಭರ್ಜರಿ ರ‍್ಯಾಲಿಗಳನ್ನು ನಡೆಸಿತ್ತು ಬಿಜೆಪಿ. ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಅವರ ಹೆಸರಿನಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದ್ದ ಬಿಜೆಪಿಯ ಯೋಜನೆ ತಲೆಕೆಳಗಾಗಿದೆ.
ಇನ್ನು, ಬಿಜೆಪಿಯ ಹೀನಾಯ ಸೋಲಿಗೆ ಕಾರಣಗಳನ್ನು ನೋಡುವುದಾದರೆ, ನಂದಿನಿ ವಿವಾದ, ಮೀಸಲಾತಿ, ಒಳಮೀಸಲಾತಿ, ಬಿಎಲ್ ಸಂತೋಷ್ ಹಿಡಿತ, ರಾಜ್ಯ ನಾಯಕರ ಕಡೆಗಣನೆ, ಅಣ್ಣಾಮಲೈಗೆ ಕರ್ನಾಟಕ ಉಸ್ತುವಾರಿ, ಪುತ್ತೂರಲ್ಲಿ ವಿಎಚ್‌ಪಿ ವಿರುದ್ದ ಅಭ್ಯರ್ಥಿ ಹಾಕಿದ್ದು, ವಿಜಯೇಂದ್ರಗೆ ಹೆಚ್ಚಿನ ಹೊಣೆ, ಅಶೋಕ್, ಸೋಮಣ್ಣ ಬಲಿಪಶು ಸೇರಿದಂತೆ ಹಲವು ಕಾರಣಗಳಿವೆ. ಅವುಗಳನ್ನು ಇಲ್ಲಿ ನೋಡೋಣ. ಚಿಕ್ಕನಾಯಕನಹಳ್ಳಿ: ಸುರೇಶ್ ಬಾಬುಗೆ ಮಣೆ ಹಾಕಿದ ಮತದಾರ, ಸೋಲು ಕಂಡ ಸಚಿವ ಜೆಸಿ ಮಾಧುಸ್ವಾಮಿ!

1. ರಾಜ್ಯ ನಾಯಕರ ಕಡೆಗಣನೆ: ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದ ರಾಜ್ಯ ನಾಯಕರನ್ನೇ ಕಡೆಗಣಿಸಿದ್ದು ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದೆ. ಬಿಎಸ್ ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸಿದ್ದು, ರಾಜ್ಯ ನಾಯಕರಿಗಿಂತ ರಾಷ್ಟ್ರೀಯ ನಾಯಕರಿಗೆ ಪಕ್ಷದಲ್ಲಿ ಹೆಚ್ಚಿನ ಗಮನ ನೀಡಿದ್ದು, ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಅಧಿಕಾರ ನಡೆಸುವಂತೆ ಒತ್ತಡ ಹಾಕಿದ್ದು ಮುಖ್ಯ ಕಾರಣ.

2. ನಂದಿನಿ- ಅಮೂಲ್ ವಿವಾದ: ಕರುನಾಡಿನ ಹೆಮ್ಮೆನ ನಂದಿನಿ ಬದಲಿಗೆ ಗುಜರಾತಿನ ಅಮೂಲ್ ಅನ್ನು ರಾಜ್ಯದಲ್ಲಿ ಪ್ರಚಾರ ಮಾಡಲು ಬಿಜೆಪಿ ನಾಯಕರು ಮುನ್ನಲೆಗೆ ಬಂದಿದ್ದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ನಾಡಿನ ರೈತರ ಹೆಗಲಿಗೆ ಹೆಗಲಾಗಿ ನಿಲ್ಲದ ಬಿಜೆಪಿಯನ್ಜು ವಿರೋಧಿಸಲು ಇದು ಪ್ರಮುಖ ಕಾರಣವಾಯಿತು. ರಾಜ್ಯದಲ್ಲಿ ನಂದಿನಿಯ ನಕಲಿ ಅಭಾವ ಸೃಷ್ಟಿಸಿ ಅಮೂಲ್ ಅನ್ನು ಪ್ರೋತ್ಸಾಹಿಸಲು ಯೋಜಿಸಿದ್ದು, ಜನರಿಗೆ ತಿಳಿಯದ ವಿಷಯವೆನಾಗಿರಲಿಲ್ಲ.

3. ಪ್ರಧಾನಿ ಮೋದಿ ರೋಡ್‌ಶೋ: ರಾಜ್ಯದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳಿಗಿಂತ ಮುಖ್ಯವಾಗಿ ಪ್ರಧಾನಿ ಮೋದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಯಿತು. ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ ನಡೆಸಿದರು. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಸಿದ ಮೂರು ರೋಡ್‌ಶೋಗಳು ಭಾರಿ ವಿರೋಧಕ್ಕೆ ಕಾರಣವಾಗಿದ್ದವು. ಮೊದಲ ರೋಡ್‌ಶೋ ನಡೆಸಿದ ನಂತರ ಅದರ ಬಗ್ಗೆ ಟೀಕೆಗಳು ಉಂಟಾದರೂ ಕೂಡ ಮತ್ತೆ ಎರಡು ದಿನ ರೋಡ್‌ಶೋ ನಡೆಸಿ ಜನರಿಗೆ ತೊಂದರೆ ನೀಡಿದ್ದು, ಬಿಜೆಪಿಗೆ ದೊಡ್ಡ ಉಳಿಪೆಟ್ಟು.

4. ಯಡಿಯೂರಪ್ಪ, ಈಶ್ವರಪ್ಪ ಶೆಟ್ಟರ್ ಬಿಟ್ಟಿದ್ದು: ರಾಜ್ಯದಲ್ಲಿ ಲವ – ಕುಶ ಎಂದೇ ಪ್ರಖ್ಯಾತರಾಗಿದ್ದ, ರಾಜ್ಯದಲ್ಲಿ ಕಮಲ ಪಕ್ಷಕ್ಕೆ ನೆಲೆ ಒದಗಿಸಿದ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈರ್ಶವರಪ್ಪ ಅವರನ್ನು ಈ ಬಾರಿ ಚುನಾವಣಾ ರಾಜಕಾರಣದಿಂದ ಹೊರಗಿಟ್ಟಿದ್ದು. ಇದು ಕೂಡ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಭಾರಿ ನಿರಾಸೆಗೆ ಕಾರಣವಾಗಿತ್ತು.

5. ಮೀಸಲಾತಿ ರದ್ದು ಮತ್ತು ಒಳಮೀಸಲಾತಿ: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿತು. ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿತ್ತು. ಇದರ ಜೊತೆಗೆ ಒಳ ಮೀಸಲಾತಿಯನ್ನು ಘೋಷಣೆ ಮಾಡಿತ್ತು. ಒಳ ಮೀಸಲಾತಿ ಘೋಷಣೆ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಒಡಕು ಮೂಡಿಸಲು ಮಾಡಲಾಗಿದೆ ಎಂದು ಭಾರೀ ಆಕ್ರೋಶ ಹೊರ ಬಂದಿತ್ತು. ಇದಲ್ಲದೆ ಮುಸ್ಲಿಂ ಸಮುದಾಯ ಮತ್ತು ಬಂಜಾರ ಸಮುದಾಯ ಬಿಜೆಪಿ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದವು.

6. ಬಿಎಲ್ ಸಂತೋಷ್‌ಗೆ ಹೆಚ್ಚಿನ ಮನ್ನಣೆ: ರಾಜ್ಯದಲ್ಲಿ ಬಿಜೆಪಿಯ ನೆಲೆ ಲಿಂಗಾಯತರ ಮೇಲಿದ್ದರೂ ಕೂಡ ಬ್ರಾಹ್ಮಣರಿಗೆ ಅದರಲ್ಲೂ ಆರ್‌ಎಸ್‌ಎಸ್‌ ಹಿನ್ನೆಲೆಯ ಬಿಎಲ್ ಸಂತೋಷ್‌ಗೆ ಭಾರಿ ಪ್ರಾಶಸ್ತ್ಯ ನೀಡಿದ್ದು ಬಿಜೆಪಿ ಸೋಲಿಗೆ ಮುಖ್ಯ ಕಾರಣಗಳಲ್ಲಿ ಒಂದು. ಲಿಂಗಾಯತರ ಬೆಂಬಲ ಬೇಡ ಎಂದು ಬಿಎಸ್ ಸಂತೋಷ್ ಹೇಳಿದ್ದಾರೆ ಎಂಬ ಹೇಳಿಕೆ ಭಾರಿ ವೈರಲ್ ಆಗಿತ್ತು.

7. ಅಣ್ಣಾಮಲೈ ಕೈಗೆ ಕರ್ನಾಟಕ: ತಮಿಳುನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಕರ್ನಾಟಕದ ಉಸ್ತುವಾರಿ ವಹಿಸಿದ್ದು ಬಿಜೆಪಿ ತಪ್ಪು. ಗೆಲುವಿನ ರುಚಿ ನೋಡದ ಅಣ್ಣಾಮಲೈ ಕೈಗೆ ಕರ್ನಾಟಕ ಒಪ್ಪಿಸಿದ್ದು ಬಿಜೆಪಿ ಬಹುದೊಡ್ಡ ತಪ್ಪು. ಅದರಲ್ಲೂ ತಮಿಳಿನಲ್ಲಿ ಭಾಷಣ, ತಮಿಳುನಾಡಿನ ನಾಡಗೀತೆಗಳ ಪ್ರಚಾರ ಕೂಡ ಇದರಲ್ಲಿ ಸೇರಿದೆ.

8. ವಿಜಯೇಂದ್ರಗೆ ಹೆಚ್ಚಿನ ಹೊಣೆ ಸಂಪೂರ್ಣ ವಿಫಲ: ಎರಡನೇ ಜನರೇಷನ್ ಅನ್ನು ರಾಜ್ಯದಲ್ಲಿ ಬೆಳೆಸುತ್ತೇವೆ ಎಂದು ಬೇರೆಯವರಿಗೆ ಬಿಟ್ಟು ಕೇವಲ ಬಿವೈ ವಿಜಯೇಂದ್ರಗೆ ಹೆಚ್ಚಿನ ಹೊಣೆ ಹೊರಿಸಿದ್ದು, ಇದನ್ನು ನಿಭಾಯಿಸಲು ಆಗದೆ ವಿಜಯೇಂದ್ರ ಸಂಪೂರ್ಣ ವಿಫಲರಾಗಿದ್ದು.

9. ರಾಜ್ಯ ಪ್ರವಾಸ ಬಿಟ್ಟ ಬಿಜೆಪಿ ನಾಯಕರು: ಈ ಬಾರಿಯ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಬಿಟ್ಟರೇ ಇಡೀ ರಾಜ್ಯ ಪ್ರವಾಸ ಮಾಡಿದ್ದು ಬಿವೈ ವಿಜಯೇಂದ್ರ ಮಾತ್ರ. ರಾಜ್ಯ ನಾಯಕರು ಪ್ರಧಾನಿ ಮೋದಿ ಮತ್ತು ವಿಜಯೇಂದ್ರ ಮೇಲೆ ಎಲ್ಲಾ ಹೊಣೆ ಹಾಕಿ ತಾವು ಮಾತ್ರ ಆರಾಮಾಗಿ ಇದ್ದರು. ಇದು ಜನರಲ್ಲಿ ಬಿಜೆಪಿ ನಾಯಕರ ಬಗೆಗಿನ ವಿಶ್ವಾಸ ಕುಂದಿಸಿತು.

10. ಸೋಮಣ್ಣ ಮಗನಿಗೆ ಇಲ್ಲ ಮನ್ನಣೆ: ಎರಡನೇ ಜನರೆಷನ್ ಅನ್ನು ರಾಜ್ಯದಲ್ಲಿ ಬೆಳೆಸುತ್ತೇವೆ ಎಂದವರು ಕೇವಲ ವಿಜಯೇಂದ್ರಗೆ ಮಾತ್ರ ಮನ್ನಣೆ ನೀಡಿದ್ದು. ಕಿರಿಯ ನಾಯಕರನ್ನು ಆರಿಸುವಾಗ, ಅವರಿಗೆ ಹೊಣೆ ನೀಡುವ ವಿಷಯದಲ್ಲೂ ತಾರತಮ್ಯ. ಸೋಮಣ್ಣ ಮಗನಿಗೆ ಎಲ್ಲೂ ಟಿಕೆಟ್ ನೀಡಲಿಲ್ಲ. ಟಿಕೆಟ್ ನಿರೀಕ್ಷೆಯಲ್ಲಿದ್ದ ಕೆಎಸ್ ಈಶ್ವರಪ್ಪ ಮಗನಿಗೂ ಟಿಕೆಟ್ ನೀಡಲಿಲ್ಲ.

11. ಅಶೋಕ್, ಸೋಮಣ್ಣ ಬಲಿಪಶು: ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಅವರನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಕಣಕ್ಕೆ ಇಳಿಸಿ ತಮ್ಮ ಇನ್ನೊಂದು ಕ್ಷೇತ್ರಗಳ ಕಡೆ ಗಮನ ಹರಿಸದಂತೆ ಮಾಡಿದ್ದು. ವಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದು, ಅವರ ಚುನಾವಣಾ ರಾಜಕೀಯ ಬಹುತೇಕ ಮುಗಿದ ಹಾಗಿದೆ.

12. ಸವದಿ ವಿರೋಧ ಕಟ್ಟಿಕೊಂಡಿದ್ದು: ಲಿಂಗಾಯತ ನಾಯಕ ಮತ್ತು ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಮುಖ್ಯ ನಾಯಕರಾಗಿದ್ದ ಲಕ್ಷ್ಮಣ ಸವದಿ ಅವರ ವಿರೋಧ ಕಟ್ಟಿಕೊಂಡಿದ್ದು. ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದೆ ಅವರನನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ.

13: ಪುತ್ತೂರಲ್ಲಿ ವಿಎಚ್‌ಪಿ ವಿರುದ್ಧ ಅಭ್ಯರ್ಥಿ ಹಾಕಿದ್ದು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪುತ್ತೂರಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಬಿಜೆಪಿ ಮತಗಳು ಇಬ್ಬಾಗಗೊಂಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಅರುಣ್ ಕುಮಾರ್ ಪುತ್ತಿಲ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದು ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.

14. ಮಲೆನಾಡಲ್ಲಿ ಮೋದಿ ಮೇಲೆ ಅವಲಂಬನೆ: ಮಲೆನಾಡಿನ ಭಾಗದಲ್ಲಿ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಭಿಸಿದ್ದು, ಬಿಜೆಪಿ ಸೋಲಿಗೆ ಕಾರಣ. ಮೋಲೆ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂಬ ಆಸೆಯಲ್ಲಿ ಮಲೆನಾಡಿನಿಂದ ಬಿಜೆಪಿ ಕೊಚ್ಚಿ ಹೋಗಿದೆ.

15. ಕೊಡಗಿನಲ್ಲಿ ಅಭ್ಯರ್ಥಿ ಬದಲಾವಣೆ ಮಾಡದೆ ಇದ್ದದು: ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಅಭಿವೃದ್ಧಿ ಮಾಡದೇ ಇದ್ದರೂ, ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಲಿಲ್ಲ. ಇದು ಇಲ್ಲಿನ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಕೊಡಗಿನಿಂದ ಬಿಜೆಪಿ ಗೇಟ್ ಪಾಸ್ ಪಡೆದಿದೆ.

16. ಅಭಿವೃದ್ಧಿಗಿಂತ ಹಿಂದುತ್ವದ ವಿಚಾರಕ್ಕೆ ಪ್ರಾಶಸ್ತ್ಯ: ಬಿಜೆಪಿ ಮತ್ತು ಅದರ ನಾಯಕರು ಅಭಿವೃದ್ಧಿಗಿಂತ ಹೆಚ್ಚಾಗಿ ಹಿಂದೂ ಧರ್ಮ, ಹಿಂದುತ್ವ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತು. ಅಭಿವೃದ್ಧಿಯ ಬಗ್ಗೆ ಎಲ್ಲೂ ಪ್ರಚಾರ ಮಾಡದ ಬಿಜೆಪಿ ನಾಯಕರು ಹಿಂದೂ ಧರ್ಮ ಉಳಿಯಬೇಕು ಎಂಬಂತಹ ಮಾತುಗಳನ್ನೆ ಹೆಚ್ಚಾಗಿ ಪ್ರಚಾರಗಳಲ್ಲಿ ಹೇಳಿದ್ದು ಅಭಿವೃದ್ಧಿ ಬಯಸಿದ್ದ ಜನರಿಗೆ ಆಪ್ತವಾಗಲಿಲ್ಲ.

17. ಭ್ರಷ್ಟಾಚಾರ: ಬಿಜೆಪಿ ಎಂದರೇ ಭ್ರಷ್ಟಾಚಾರ ಎಂಬಂತಾಗಿದೆ ರಾಜ್ಯದ ಪರಿಸ್ಥಿತಿ. 40% ಕಮಿಷನ್ ಸರ್ಕಾರ ಎಂಬುದನ್ನು ಹೆಚ್ಚು ಜಾಗರೂಕತೆ ಮತ್ತು ಬುದ್ದಿವಂತಿಕೆಯಿಂದ ಕಾಂಗ್ರೆಸ್ ಬಳಸಿಕೊಂಡಿತು. ರಾಜ್ಯ ನಾಯಕರ ವಿರುದ್ಧ ಗುತ್ತಿಗೆದಾರರ ಆರೋಪ ಕೂಡ ಇದಕ್ಕೆ ಕಾರಣ.

18. ಬ್ರಾಹ್ಮಣ ಸಿಎಂ: ರಾಜ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಬಿಎಲ್ ಸಂತೋಷ್ ಮತ್ತು ಕೇಂದ್ರ ನಾಯಕರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ವಿಚಾರ ಲಿಂಗಾಯತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಲಿಂಗಾಯತ ಸಿಎಂ ಮತ್ತು ಬ್ರಾಹ್ಮಣ ಸಿಎಂ ವಿಚಾರ ಭಾರಿ ಗದ್ದಲಕ್ಕೂ ಸಾಕ್ಷಿಯಾಗಿತ್ತು. ಇದನ್ನು ಕಾಂಗ್ರೆಸ್ ಜಾಣ್ಮೇಯಿಂದ ಬಳಸಿಕೊಂಡಿತ್ತು.

19. ಲಿಂಗಾಯತ ವಿಚಾರ: ಬಿಜೆಪಿಗೆ ರಾಜ್ಯದಲ್ಲಿ ಭಧ್ರ ಬುನಾದಿ ಕೊಟ್ಟಿರುವುದು ಲಿಂಗಾಯತರು. ಲಿಂಗಾಯತರನ್ನು ನಂಬಿಕೊಂಡೆ ಬಿಜೆಪಿ ಇಲ್ಲಿ ನೆಲೆಸಿದೆ. ಆದರೆ, ಅನೆಕ ಬಾರಿ ಲಿಂಗಾಯತರ ವಿರುದ್ಧ ಬಿಜೆಪಿ ರಾಷ್ಟ್ರೀಯ ನಾಯಕರ ಮಾತುಗಳು ಬಾರಿ ಚರ್ಚೆ ಹುಟ್ಟುಹಾಕಿದ್ದವು. ಲಿಂಗಾಯತ ನಾಯಕರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯತೊಡಗಿತು

20.ಪ್ರಾದೇಶಿಕತೆ ಕಡೆಗಣನೆ: ಬಿಜೆಪಿ ಒಂದು ರಾಷ್ಟ್ರ, ಒಂದು ಭಾಷೆ ಎಂಬುದನ್ನು ಹೇರಿಕೆ ಮಾಡುತ್ತಿದೆ. ಹಿಂದಿ ಹೇರಿಕೆಗೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಹಲವು ಬಾರಿ ಆರೋಪಿಸಿದ್ದವು. ಇದು ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿಯೂ ಜನರ ಎದುರಿಗೆ ಬಂದು ಜನರಿಂದಲೂ ತೀವ್ರ ಟೀಕೆಗೆ ಕಾರಣವಾಗಿತ್ತು.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading