ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಕಾಯುವಿಕೆ ಕೊನೆಗೂ ಪೂರ್ಣಗೊಂಡಿದೆ. ಬಹು ನಿರೀಕ್ಷಿತ ಆ್ಯಕ್ಷನ್ ಎಂಟರ್‌ಟೈನರ್ ‘ಸಿಕಂದರ್’ನ ಆಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದು, ಉತ್ತಮ ವ್ಯವಹಾರ ನಡೆಸುತ್ತಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದು, ಪ್ರೇಕ್ಷಕರನ್ನು ಮನರಂಜಿಸುವ ಭರವಸೆ ದೊಡ್ಡ ಮಟ್ಟದಲ್ಲೇ ಇದೆ.
ಸಿಕಂದರ್ ಚಿತ್ರತಂಡ 5 ದಿನಗಳ ಮುಂಚಿತವಾಗಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ತೆರೆದಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ದಿನದ ಮಧ್ಯಾಹ್ನ 3 ಗಂಟೆಗೂ ಮೊದಲು, ಸಿಕಂದರ್ ಹಿಂದಿ 2Dಯಲ್ಲಿ 5,310 ಪ್ರದರ್ಶನಗಳಿಗೆ 41,180 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ 1.33 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಚಿತ್ರದ ಒಟ್ಟು ಗಳಿಕೆ 3.6 ಕೋಟಿ ರೂಪಾಯಿ ದಾಟಿದೆ. ಈ ಅಂಕಿಅಂಶಗಳು ಏರಿಕೆ ಕಾಣುತ್ತಿದೆ.ಬಹುನಿರೀಕ್ಷಿತ ಚಿತ್ರ ಇದೇ ಭಾನುವಾರ ತೆರೆಗಪ್ಪಳಿಸಲಿದೆ. ಮಾರ್ಚ್ 30ರಂದು ಬಿಡುಗಡೆ ಆಗಲಿರುವ ಚಿತ್ರದ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈದ್ ಸಂದರ್ಭ ಬಿಡುಗಡೆಯಾಗುತ್ತಿರುವ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಲಿದೆ ಎಂದು ಸಿನಿತಜ್ಞರು ಅಂದಾಜಿಸಿದ್ದಾರೆ. ಸಲ್ಮಾನ್ ಅವರ ಕೊನೆಯ ಟೈಗರ್ 3 ಭಾನುವಾರದಂದು ಅದ್ಭುತ ಓಪನಿಂಗ್ ಪಡೆದುಕೊಂಡಿತ್ತು. ಸಿಕಂದರ್ ಕೂಡಾ ಅದೇ ರೀತಿ ಭರ್ಜರಿ ಓಪನಿಂಗ್ ಕಾಣುವ ಭರವಸೆ ಇದೆ.
ಸಿಕಂದರ್ PVR, INOX, Cinepolis ಮತ್ತು Miraj ಸೇರಿದಂತೆ ಎಲ್ಲಾ ಪ್ರಮುಖ ಮಲ್ಟಿಪ್ಲೆಕ್ಸ್ ಹಾಗೂ ಪ್ರಾದೇಶಿಕ ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ. ಬುಕ್ ಮೈ ಶೋ ಮತ್ತು ಪೇಟಿಎಂನಂತಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬುಕಿಂಗ್ ಮಾಡಬಹುದಾಗಿದೆ. ಈ ಮೂಲಕ ಅಭಿಮಾನಿಗಳು ತಮ್ಮ ಸೀಟ್ ಅನ್ನು ಮೊದಲೇ ಕಾಯ್ದಿರಿಸಬಹುದಾಗಿದೆ.
ಭಾನುವಾರ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಈಗಾಗಲೇ ಸಖತ್ ಸದ್ದು ಮಾಡಿದೆ. ನಟನೆ, ಆಕರ್ಷಕ ಸಂಭಾಷಣೆ, ಆ್ಯಕ್ಷನ್ ಸೀನ್ಗಳನ್ನು ಫ್ಯಾನ್ಸ್ ಮೆಚ್ಚಿದ್ದಾರೆ. ಗಜಿನಿ ಮತ್ತು ಹಾಲಿಡೇ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಎ.ಆರ್.ಮುರುಗದಾಸ್ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರೊಂದಿಗೆ ಕೈಜೋಡಿಸಿದ್ದಾರೆ. ಅಲ್ಲದೇ, ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕಾಜಲ್ ಅಗರ್ವಾಲ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಲಲಿದ್ದು, ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿದೆ.