ಬೆಂಗಳೂರು,ಮಾ.24 (Zoom Karnataka): ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ ವಿಡಿಯೋ ಮಾಡಿದ್ದ ಆರೋಪದಡಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಸವೇಶ್ವರ ನಗರ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ಘಟಕದ ಉಸ್ತುವಾರಿ ಪಿಎಸ್ಐ ಭಾನುಪ್ರಕಾಶ್ ಎಂಬವರು ನೀಡಿದ ದೂರಿನನ್ವಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಜತ್ ಕಿಶನ್ ಹಾಗೂ ವಿನಯ್ ಗೌಡ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ಶಾರ್ಟ್ ವಿಡಿಯೋ ಮಾಡಿದ್ದು, ಅದನ್ನು ಬುಜ್ಜಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಶಾಂತಿಭಂಗದ ದುರ್ವರ್ತನೆ ತೋರಲಾಗಿದೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.