ಚಿಕ್ಕಮಗಳೂರು,ನ13(Zoom Karnataka):ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿರೋಧಿಸಿ ಮಲೆನಾಡಿನಲ್ಲಿ ಹುಟ್ಟಿಕೊಂಡಿದ್ದ ನಕ್ಸಲ್ ಚಳವಳಿ ಕ್ರಮೇಣ ಅಸ್ತಿತ್ವ ಕಳೆದುಕೊಂಡಿತ್ತು. ಇದೀಗ ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ ಒತ್ತುವರಿ ತೆರವಿನ ವಿರೋಧಿ ಕಿಚ್ಚನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಮಲೆನಾಡಿನಲ್ಲಿ ನಕ್ಸಲ್ ಹೋರಾಟ ಮರು ಜೀವ ಪಡೆದುಕೊಂಡಿದೆ.
ದಶಕಗಳ ಕಾಲ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿರೋಧಿಸಿ ಹುಟ್ಟಿಕೊಂಡಿದ್ದ ನಕ್ಸಲ್ ಚಳುವಳಿ ದಶಕಗಳ ಕಾಲ ಆತಂಕ ಸೃಷ್ಟಿ ಮಾಡಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಕಾಫಿನಾಡು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ವಿಚಾರ, ಬೆಂಬಲ ಸಿಗದೆ ಪಕ್ಕದ ರಾಜ್ಯ ಕೇರಳಕ್ಕೆ ಶಿಫ್ಟ್ ಆಗಿತ್ತು. ಆದರೆ ಇದೀಗ, ಕರ್ನಾಟಕದ ಕರಾವಳಿ ಮಲೆನಾಡು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾದು ಕುಳಿತ್ತಿದ್ದ ನಕ್ಸಲರು ಮತ್ತ ಚಟುವಟಿಕೆ ಆರಂಭಿಸಿದ್ದಾರೆ.
ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಭಾಗದಲ್ಲಿ ಆತಂಕ ಸೃಷ್ಟಿಸಿರುವ ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ಆತಂಕವನ್ನೇ ಅಸ್ತ್ರ ಮಾಡಿಕೊಂಡಿರುವ ನಕ್ಸಲ್ ತಂಡ, ಕಾಫಿನಾಡಿನಲ್ಲಿ ಚಟುವಟಿಕೆ ನಡೆಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ತುಂಗಾ ತಂಡದ ಕುಖ್ಯಾತ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಜನ ಶಸ್ತ್ರಧಾರಿಗಳ ತಂಡ ಭೇಟಿ ನೀಡಿರುವುದು ಧೃಡಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ ತಾಲೂಕಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
15 ದಿನಗಳಿಂದ ಸಕ್ರಿಯರಾಗಿರುವ ನಕ್ಸಲರು
ಕಳೆದ 15 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಮುಂಡಗಾರು ಲತಾ ನೇತೃತ್ವದ ತಂಡ ಸಕ್ರಿಯವಾಗಿದ್ದು, ಕಾಡಂಚಿನ ಮನೆಗಳಿಗೆ ಭೇಟಿ ನೀಡಿದೆ ಎನ್ನಲಾಗುತ್ತಿದೆ. ಕಸ್ತೂರಿ ರಂಗನ್ ವರದಿ ಜಾರಿ ಸೇರಿದಂತೆ ಅರಣ್ಯ ಒತ್ತುವರಿ ತೆರವು ವಿರುದ್ಧ ಬೆಂಬಲ ಕೋರಿ ಸಭೆ ನಡೆಸಲಾಗಿದೆ ಎಂಬ ಮಾಹಿತಿ ಮೇರೆಗೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ, ನಕ್ಸಲ್ ನಿಗ್ರಹ ಪಡೆ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ಕೊಪ್ಪ ತಾಲೂಕಿನ ಯಡಗುಂದ, ಕಡೆಗುಂಡಿ ಗ್ರಾಮದ ಮನೆಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗಿದೆ. ಇದೇ ವೇಳೆ, ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎನ್ನುವವರ ಮನೆಯಲ್ಲಿ ಮೂರು ಬಂದೂಕುಗಳು ಪತ್ತೆಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂದೂಕು ಸಿಕ್ಕಿರುವ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.