‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ಮೊದಲ ಸಿನಿಮಾ ಅಂಶು. ಟ್ರೇಲರ್ನಿಂದ ನೋಡುಗರಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರದ ಅರ್ಥಪೂರ್ಣ ಹಾಡೊಂದು ಇದೀಗ ಬಿಡುಗಡೆಗೊಂಡಿದೆ. ಕೇಳಿದಾಕ್ಷಣವೇ ನೇರವಾಗಿ ಎದೆಗಿಳಿದು ಬಿಡುವ ಈ ಹಾಡಿಗೀಗ ಕೇಳುಗರಿಂದ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿವೆ.
ಚಿತ್ರ ಸನ್ನಿವೇಶಗಳಿಗೆ ತಕ್ಕುದಾಗಿ ರೂಪುಗೊಂಡಂತಿರುವ ಈ ಹಾಡು ಒಂದಿಡೀ ಕಥೆಯ ಆತ್ಮವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ. ‘ಅಂಶು’ ಈ ಹಾಡಿನ ಮೂಲಕವೇ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಿದೆ.
ಮೂಲತಃ ಪಂಜಾಬಿನವರಾಗಿದ್ದರೂ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಕನ್ನಡದವರೇ ಎಂಬಂತಾಗಿರುವಾತ ಗಾಯಕ ಜಸ್ಕರಣ್ ಸಿಂಗ್. ಕನ್ನಡದಲ್ಲಿ ಬಹುಬೇಡಿಕೆ ಹೊಂದಿರುವ ಇವರು ಈ ಹಾಡಿಗೆ ದನಿಯಾಗಿದ್ದಾರೆ. ”ನೀರ ಮೇಲೆ ಗುಳ್ಳೆ. ಬಿಂಬ ಕಾಣೋ ವೇಳೆ, ನಿಜವು ಒಂದು ಸುಳ್ಳೇ ಅಲೆಮಾರಿ… ಮುಗಿದ ದಾರಿ” ಎಂಬ ಸಮ್ಮೋಹಕ ಸಾಲುಗಳನ್ನು ಮಹೇಂದ್ರ ಗೌಡ ಅವರು ಒದಗಿಸಿದ್ದಾರೆ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಕೇಳುಗರ ಕಡೆಯಿಂದ ಬರುತ್ತಿರೋ ಪ್ರತಿಕ್ರಿಯೆಗಳೇ ಎಲ್ಲವನ್ನೂ ಹೇಳುವಂತಿವೆ. ಇದರ ದೃಶ್ಯಗಳ ಮೂಲಕ ನಿಶಾ ರವಿಕೃಷ್ಣನ್ ಪಾತ್ರದ ಒಂದಷ್ಟು ಚಹರೆಗಳನ್ನೂ ಕೂಡಾ ಚಿತ್ರತಂಡ ಜಾಹೀರು ಮಾಡಿದೆ.ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಭದ್ರ ಸ್ಥಾನ ಗಿಟ್ಟಿಸಿಕೊಳ್ಳುವ ಕೆಲವರು ಹಿರಿತೆರೆಯಲ್ಲೂ ಸಾಧನೆ ಮಾಡಿರುವ ಹಲವು ಉದಾಹರಣೆಗಳಿವೆ. ಕಿರುತೆರೆಯ ಬಹುತೇಕ ಕಲಾವಿದರು ಹಿರಿತೆರೆಯಲ್ಲಿ ಛಾಪು ಮೂಡಿಸಬೇಕು ಎಂಬ ಕನಸು ಕಾಣೋದು ಸಹಜ.
ಈ ಪೈಕಿ ಕೆಲವರು ಯಶಸ್ವಿಯಾದರೆ, ಕೆಲವರು ಬಂದ ದಾರಿಯಲ್ಲೇ ಹಿಂದೆ ಹೋಗ್ತಾರೆ. ಸದ್ಯ ಗಟ್ಟಿಮೇಳ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್ ‘ಅಂಶು’ ಎಂಬ ಮಹಿಳಾ ಪ್ರಧಾನ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗುತ್ತಿದ್ದಾರೆ. ಸಿನಿಮಾ ಎಷ್ಟರ ಮಟ್ಟಿಗೆ ಯಶ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.