ಬೆಂಗಳೂರು,ನ12(Zoom Karnataka):ಮನೆ ಮಾರಿದ ಹಣಕ್ಕಾಗಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಮಗ ಮತ್ತು ಆತನಿಗೆ ನೆರವಾದ ವ್ಯಕ್ತಿಸಹಿತ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯಮ್ಮ (45) ಎಂಬಾಕೆಯನ್ನು ಮಾರಕಾಸ್ತ್ರದಿಂದ ಹೊಡೆದು, ತಲೆಯನ್ನು ಗೋಡೆಗೆ ಗುದ್ದಿ ಹತ್ಯೆಗೈದಿದ್ದ ಮಗ ಉಮೇಶ್ ಹಾಗೂ ಮತ್ತೋರ್ವನನ್ನು ಬಂಧಿಸಲಾಗಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದ ಮನೆಯಲ್ಲಿ ಶನಿವಾರ ಘಟನೆ ನಡೆದಿತ್ತು.
ಜಯಮ್ಮನ ಕಿರಿಯ ಪುತ್ರ ಗಿರೀಶ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯಲ್ಲಿ ಚಾಲಕನಾಗಿದ್ದರು. ಎರಡನೇ ಮಗನ ಮೇಲೆ ಪ್ರೀತಿ ಜಾಸ್ತಿ, ತನ್ನ ಮೇಲೆ ಪ್ರೀತಿ ಇಲ್ಲವೆಂದು ಸದಾ ಜಗಳ ಮಾಡುತ್ತಿದ್ದ ಮೊದಲ ಮಗ ಉಮೇಶನನ್ನು ಮನೆಯಿಂದ ಹೊರಹಾಕಿದ್ದ ಜಯಮ್ಮ, ಮನೆ ಮಾರಾಟ ಮಾಡಿ ಕಿರಿಯ ಪುತ್ರನೊಂದಿಗೆ ಹೊಂಗಸಂದ್ರದಲ್ಲಿ ವಾಸವಿದ್ದರು. ಮನೆ ಮಾರಾಟದ ದುಡ್ಡಿಗಾಗಿ ಪೀಡಿಸುತ್ತಿದ್ದ ಆರೋಪಿ, ಕಳೆದ ಶುಕ್ರವಾರ ರಾತ್ರಿ 1.30ರ ವೇಳೆ ತಾಯಿ ಒಬ್ಬರೇ ಇದ್ದಾಗ ತನ್ನ ಸ್ನೇಹಿತನೊಂದಿಗೆ ಬಂದು ಹತ್ಯೆಗೈದಿದ್ದ. ಶನಿವಾರ ಬೆಳಗ್ಗೆ ಗಿರೀಶ್‌ನ ಸ್ನೇಹಿತ ಪ್ರಭಾಕರ್ ರೆಡ್ಡಿ ಎಂಬಾತ ಮನೆಗೆ ಬಂದು ಬಾಗಿಲು ತಟ್ಟಿದರೂ ಜಯಮ್ಮ ಸ್ಪಂದಿಸಿರಲಿಲ್ಲ. ಬಳಿಕ ಮನೆ ಮಾಲೀಕರ ಸಹಾಯದಿಂದ ನಕಲಿ ಕೀ ಬಳಸಿ ಬಾಗಿಲು ತೆರೆದಾಗ ಜಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೃತಳ ಹಿರಿಯ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಯಲಾಗಿದೆ. ಆರೋಪಿ ಹಾಗೂ ಆತನಿಗೆ ನೆರವು ನೀಡಿದ್ದ ಮತ್ತೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.