ಬೆಂಗಳೂರು, ಮೇ 29(Zoom Karnataka): ಮಹಿಳೆಯ ಅಪಹರಣ ಪ್ರಕರಣವೀಗ ರೇವಣ್ಣ ಅವರ ಪತ್ನಿ ಭವಾನಿ ಅವರಿಗೂ ಸಂಕಷ್ಟ ತಂದಿದೆ. ಇಂದು ಈ ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರಣೆಯು ಮತ್ತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆಯಲಿದೆ.
- ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಆರೋಪದಡಿ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್‌ಗೂ ಎಸ್ಐಟಿ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಕೈವಾಡ ಇದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭವಾನಿ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರವೂ ನಡೆದಿತ್ತು. ಬಳಿಕ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದೆ. ಇನ್ನು ನಿನ್ನೆ ನಡೆದ ವಿಚಾರಣೆ ವೇಳೆ ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲರು, ಅಪಹರಣ ಪ್ರಕರಣದ ದೂರಿನಲ್ಲಿ ಭವಾನಿ ರೇವಣ್ಣ ಹೆಸರಿದ್ದರೂ ಎಫ್‌ಐಆರ್ ದಾಖಲಾಗಿಲ್ಲ. ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಎಸ್‌ಐಟಿ ಕೂಡಾ ಈವರೆಗೆ ನೋಟಿಸ್ ಜಾರಿಗೊಳಿಸಿಲ್ಲ. ಆದರೆ ಪತ್ರಿಕೆಗಳಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪ್ರಕಟವಾಗಿದೆ. ಮೇ 15ರಂದು ಭವಾನಿ ರೇವಣ್ಣ ಎಸ್‌ಐಟಿಗೆ ಪತ್ರ ಬರೆದು ತಮ್ಮ ವಿರುದ್ಧದ ಕೇಸಿನ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆ. ಆದರೆ ಎಸ್‌ಐಟಿ ಪ್ರತಿಕ್ರಿಯಿಸದೆ ಈಗ ಮತ್ತೆ 2ನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ ಎಂಬ ಸುದ್ದಿ ಬರುತ್ತಿದೆ. ಹೀಗಾಗಿ ಭವಾನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದಿದ್ದಾರೆ. ಇನ್ನು ಎಸ್ಐಟಿ ಪರ ವಾದ ಮಂಡಿಸಿದ ವಕೀಲರು, ಈವರೆಗೆ ಭವಾನಿ ರೇವಣ್ಣಗೆ ನಾವು ನೋಟಿಸ್ ಜಾರಿ ಮಾಡಿಲ್ಲ. ಯಾವ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆಂಬುದು ತಮಗೆ ತಿಳಿದಿಲ್ಲ. ಎಸ್‌ಐಟಿ ತನಿಖಾಧಿಕಾರಿಯಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಆಕ್ಷೇಪಣೆ ಸಲ್ಲಿಸುತ್ತೇನೆ ಇದಕ್ಕೆ ಕಾಲಾವಕಾಶ ಬೇಕು ಎಂದು ತಿಳಿಸಿದ್ದಾರೆ.