ವಾಷಿಂಗ್ಟನ್: ಕೊಲೆ ಮಾಡಿದ ನಂತರ ಶವ ಕತ್ತರಿಸಿ ಹೃದಯವನ್ನು ತರಕಾರಿ ಜತೆ ಬೇಯಿಸಿ ಸಾಂಬಾರ್ ಮಾಡಿ ಮನೆಯವರಿಗೆ ಬಡಿಸಿರುವ ವಿಚಿತ್ರ ಮತ್ತು ಭಯಾನಕ ಘಟನೆ ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ.
ಒಕ್ಲಹೋಮ ರಾಜ್ಯದಲ್ಲಿ ತ್ರಿವಳಿ ಕೊಲೆಯ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಕೆಯನ್ನು ಕೊಲೆ ಮಾಡಿದ ನಂತರ ಮೃತದೇಹದಲ್ಲಿನ ಹೃದಯವನ್ನು ತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ ಅಡುಗೆ ಮಾಡಿ ಬಡಿಸಿದ್ದಾನೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದೆ.
ಒಕ್ಲಹೋಮದ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಕೊಲೆ ಮಾಡಿದ ಬಳಿಕ ಆತ ಶವದಿಂದ ಕೆಲವು ಅಂಗಗಳನ್ನು ಬೇರ್ಪಡಿಸಿದ್ದಾನೆ. ಹೃದಯವನ್ನು ಕತ್ತರಿಸಿ, ಆಲೂಗಡ್ಡೆಯೊಂದಿಗೆ ಬೇಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆತ ಮೃತ ಮಹಿಳೆಯ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತಂದು ಅಲ್ಲಿ ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಚಿಕ್ಕಪ್ಪ ಮತ್ತು ಅವರ ಹೆಂಡತಿಗೆ ಬಡಿಸಿದ್ದಾನೆ ಎಂದು ತನಿಖಾಧಿಕಾರಿಗಳು ಚಿಕಾಶಾದ ಗ್ರೇಡಿ ಕೌಂಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಳಿಕ ಆರೋಪಿ ಆಂಡರ್ಸನ್ ಆ ಮನೆಯಲ್ಲಿದ್ದ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಮೊಮ್ಮಗಳನ್ನು ಕೂಡ ಕೊಂದಿದ್ದಾನೆ. ತನ್ನ ಚಿಕ್ಕಪ್ಪನಿಗೆ ಚಾಕುವಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ್ದಾನೆ. ಈ ಮೊದಲು ಕೂಡ ಕೊಲೆ ಮಾಡಿರುವ ಆರೋಪ ಹೊತ್ತಿರುವ ಆಂಡರ್ಸನ್ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಇತ್ತೀಚೆಗೆ ಆತ ಉತ್ತಮ ನಡವಳಿಕೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಕೆಲವೇ ವಾರಗಳ ನಂತರ ಈ ಅಪರಾಧ ಎಸಗಿದ್ದಾನೆ. 2017ರಲ್ಲಿ ಮಾದಕವಸ್ತು ಆರೋಪದ ಮೇಲೆ ಆಂಡರ್ಸನ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.