ನಾಗ್ಪುರ(ಮಹಾರಾಷ್ಟ್ರ),ನ 08(Zoom Karnataka): ಕುಡಿಯಲು ಚಹಾ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸಿಟ್ಟಾದ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೇ ಬಿಟ್ಟು ಆಪರೇಷನ್ ಥಿಯೇಟರ್‌ನಿಂದ ಹೊರನಡೆದ ಘಟನೆ ನಾಗ್ಪುರದ ಖಾತ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಶುಕ್ರವಾರ ಎಂಟು ಮಹಿಳೆಯರು ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಋಗಾಗಿ ನಾಗ್ಪುರದ ಖಾತ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ವೈದ್ಯ ತೇಜ್ರಾಮ್ ಭಲವಿ ಮೊದಲಿಗೆ ನಾಲ್ಕು ಆಪರೇಷನ್ ಯಶಸ್ವಿಯಾಗಿ ಮಾಡಿದ್ದರು. ಬಳಿಕ ಉಳಿದ ನಾಲ್ಕು ಮಹಿಳೆಯರ ಶಸ್ತ್ರಚಿಕಿತ್ಸೆಗಾಗಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅವರಿಗೆ ಅರಿವಳಿಕೆ ಚುಚ್ಚುಮದ್ದು ಕೂಡ ನೀಡಲಾಗಿತ್ತು. ಈ ವೇಳೆ, ವೈದ್ಯ ಭಲವಿ ಕುಡಿಯಲು ಚಹಾ ತರುವಂತೆ ಸಿಬ್ಬಂದಿಗೆ ಹೇಳಿದ್ದಾರೆ.
ಆದರೆ, ಯಾರೊಬ್ಬರು ಚಹಾ ತಂದು ಕೊಡದೇ ಇರುವ ಕಾರಣ ಕೋಪಗೊಂಡ ವೈದ್ಯ ಶಸ್ತ್ರಚಿಕಿತ್ಸೆಯನ್ನು ಅರ್ಧದಲ್ಲೇ ಬಿಟ್ಟು ಆಪರೇಷನ್ ಥಿಯೇಟರ್‌ನಿಂದ ಹೊರ ಹೋಗಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆಗಾಗಿ ಮತ್ತೊಬ್ಬ ವೈದ್ಯರನ್ನು ಕರೆಸಿ ಆಪರೇಷನ್ ಮಾಡಿಸಲಾಗಿದೆ. ವೈದ್ಯರ ಈ ನಡತೆಯಿಂದ ಅಸಮಾಧಾನಗೊಂಡ ಮಹಿಳೆಯರ ಕುಟುಂಬಸ್ಥರು ಅವರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾ ಪರಿಷತ್ ಉಪಾಧ್ಯಕ್ಷ ಹಾಗೂ ಆರೋಗ್ಯಾಧಿಕಾರಿಯಾಗಿರುವ ಕುಂದಾ ರಾವತ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ನೇಮಿಸಿದ್ದಾರೆ.