ಕೊಳ್ಳೇಗಾಲ,ಸೆ 08 [Zoom Karnataka] : ಹೆಬ್ಬುಲಿ ಸಿನೆಮಾದಲ್ಲಿ ನಟ ಸುದೀಪ್ ಅವರು ಮಾಡಿಸಿಕೊಂಡಿದ್ದ ಕೇಶ ವಿನ್ಯಾಸವನ್ನು ಶಾಲಾ ಮಕ್ಕಳಿಗೆ ಮಾಡಬೇಡಿ ಎಂದು ಶಿಕ್ಷಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂ.ಶಾಂತರಾಜು ಅವರು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ʼತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ತಮ್ಮ ಸಂಘದ ಸದಸ್ಯರ ಕಟಿಂಗ್ ಶಾಪ್ಗಳಲ್ಲಿ ಶಾಲಾ ಮಕ್ಕಳು ಹೆಬ್ಬುಲಿ ಕಟಿಂಗ್ ಮಾಡಿಸಲು ಕೇಳಿದರೆ ದಯವಿಟ್ಟು ಮಾಡಬೇಡಿ. ನಾವು ತರಗತಿಯಲ್ಲಿ ಈ ರೀತಿ ಕಟಿಂಗ್ ಮಾಡಿಸಬೇಡಿ ಎಂದು ತಿಳಿಸಿದ್ದರೂ, ಅಲ್ಲದೇ ಪೋಷಕರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಈ ರೀತಿ ಕಟಿಂಗ್ ಮಾಡಿಸಿಕೊಂಡು ಬರುವುದು ನಮ್ಮನ್ನು ಅಪಹಾಸ್ಯ ಮಾಡುವಂತಿದೆ. ಅಣಕಿಸುವಂತಿದೆ. ಆದ್ದರಿಂದ ಈ ಬಗ್ಗೆ ತಮ್ಮ ಸಂಘದ ಸದಸ್ಯರು ಹೆಬ್ಬುಲಿ ಕಟಿಂಗ್ ಮಾಡಬಾರದಾಗಿ ಆದೇಶ ನೀಡವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಪತ್ರದಲ್ಲಿ ಮನವಿ ತಿಳಿಸಿದ್ದಾರೆ. ಈ ಬಗ್ಗೆ ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಶಿಕ್ಷಕ ಶಾಂತರಾಜು, ʼʼಹೆಬ್ಬುಲಿ ಮಾತ್ರ ಅಲ್ಲ, ಮಕ್ಕಳು ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಕೇಶ ವಿನ್ಯಾಸ ಮಾಡಿಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಪೋಷಕರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಮಕ್ಕಳು ನಮ್ಮ ಮಾತು ಕೇಳೋದಿಲ್ಲ ಅಂತ ಪೋಷಕರೇ ಹೇಳುತ್ತಿದ್ದಾರೆ. ಹೀಗಾಗಿ ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಅವರಿಂದ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸೆಪ್ಟೆಂಬರ್ 5ರಂದು ಕ್ಷೌರಿಕರ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿದ್ದಾರೆʼʼ ಎಂದು ತಿಳಿಸಿದರು.