ಮಂಗಳೂರು ಆ 14(Zoom Karnataka): ಕಾಂಗ್ರೆಸ್ ಸರಕಾರ ಹಾಗೂ ದ.ಕ.ಜಿಲ್ಲಾಡಳಿತ ಶಾಸಕರ ಹಕ್ಕುಚ್ಯುತಿ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಮಂಗಳೂರಿನಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಮೂಡಬಿದಿರೆಯ ಇರುವೈಲ್ ಗ್ರಾಪಂ ಕಟ್ಟಡ ಉದ್ಘಾಟನೆಗೆ ಡಿಸಿ ಕಚೇರಿಯ ಪ್ರೊಟೋಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಅಚ್ಚಾಗಿದ್ದರೂ ಕಾರ್ಯಕ್ರಮ ರದ್ದು ಮಾಡಲಾಗಿದೆ. ಅಲ್ಲದೆ ಈ ವಿಚಾರಕ್ಕೆ ಮೂಡುಬಿದಿರೆ ಇಒ ಮತ್ತು ಪಿಡಿಒರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಬಂಟ್ವಾಳ ಕ್ಷೇತ್ರದ ಇರ್ವತ್ತೂರು ಗ್ರಾಪಂ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆಗೆ ಶಿಷ್ಟಾಚಾರ ಪ್ರಕಾರ ಆಮಂತ್ರಣ ಮುದ್ರಣವಾಗಿತ್ತು. ಆದರೆ ಆ.3ರಂದು ಪಿಡಿಒ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಈ ಮೂಲಕ ಬಿಜೆಪಿ ಶಾಸಕರನ್ನು ಕಡೆಗಣಿಸಿ ಕಾಂಗ್ರೆಸ್ ಪದಾಧಿಕಾರಿಗಳು ದರ್ಪ ಮೆರೆಯುತ್ತಾರೆ. ತಮ್ಮ ಮಾತು ಕೇಳದಿದ್ದಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್, ವರ್ಗಾವಣೆ ಮಾಡಿ ಬೆದರಿಸುತ್ತಾರೆ. ಆದ್ದರಿಂದ ಅಮಾನತ್ತು ಆಗಿರುವ ಅಧಿಕಾರಿಗಳನ್ನು ತಕ್ಷಣ ನೇಮಕ ಮಾಡಬೇಕು ಇಲ್ಲದಿದ್ದಲ್ಲಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜೊತೆಗೆ ಕಾಂಗ್ರೆಸ್ ಪಕ್ಷದ ಸೋತ ಅಭ್ಯರ್ಥಿ ಮಿಥುನ್ ರೈಯವರು ಡೇಟಾ ಆಪರೇಟರ್ ಅನ್ನು ಮುಲ್ಕಿಯಿಂದ ಮೂಡುಬಿದಿರೆಗೆ ವರ್ಗಾವಣೆಗೆ ಡಿಸಿಯವರಿಗೆ ಪತ್ರ ಬರೆಯುತ್ತಾರೆ. ಅವರು ಹೇಳಿದಂತೆ ಡಿಸಿಯವರು ವರ್ಗಾವಣೆ ಮಾಡಲು ತಹಶೀಲ್ದಾರ್ ಅವರಿಗೆ ಪತ್ರದಲ್ಲಿ ಸೂಚನೆ ನೀಡುತ್ತಾರೆ. ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಮಧ್ಯಾಹ್ನ ಆಗಬೇಕಿದ್ದ ಚುನಾವಣೆಯನ್ನು ನಡೆಸಲು ಬಿಡದೆ ಸಂಜೆ ಆರು ಗಂಟೆಯ ಬಳಿಕ ಚುನಾವಣೆ ನಡೆದಿದೆ. ಇಲ್ಲಿ ಸರಕಾರ ಆಡಳಿತ ನಡೆಸುತ್ತಿಲ್ಲ ಬದಲಾಗಿ ಪಕ್ಷ ಆಡಳಿತ ನಡೆಸುತ್ತಿದೆ. ಬಳಿಕ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಆಗಮಿಸಿ ಶಾಸಕರ ಅಹವಾಲನ್ನು ಆಲಿಸಿದರು. ಈ ವೇಳೆ ಬಿಜೆಪಿ ಶಾಸಕರು ಜಿಲ್ಲಾಧಿಕಾರಿಯವರೊಂದಿಗೆ ವಾಗ್ವಾದ ನಡೆಯಿತು. ಬಳಿಕ ಡಿಸಿಯವರು ಅಮಾನತು ಆಗಿರುವ ಇಬ್ಬರನ್ನೂ ಮರುನೇಮಕ ಮಾಡಲು ಸರಕಾರಕ್ಕೆ ಮನವಿ ಮಾಡಿದ್ದೇನೆ. ಅದರಂತೆ ಇಂದು ಅವರು ಮರು ನೇಮಕ ಆಗುವ ಸಾಧ್ಯತೆಯಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪ್ರೊಟೊಕಾಲ್ ಪ್ರಕಾರವೇ ಮಾಡುತ್ತೇವೆ ಎಂದು ಹೇಳಿದರು. ಆದ್ದರಿಂದ ಶಾಸಕರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಹರೀಶ್ ಪೂಂಜಾ, ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ ಮತ್ತಿತರರು ಭಾಗವಹಿಸಿದರು.
ಮಂಗಳೂರು: ಶಾಸಕರಿಗೇ ಮರ್ಯಾದೆ ಕೊಡದ ಸರಕಾರ ಜನಸಾಮಾನ್ಯರಿಗೆ ಮರ್ಯಾದೆ ಕೊಡುತ್ತದೆಯೇ – ನಳಿನ್ ಪ್ರಶ್ನೆ
ಮಂಗಳೂರು: ಪಕ್ಷದ ತುಂಡು ನಾಯಕರ ಮಾತನ್ನು ಕೇಳಿ ವಿರೋಧ ಪಕ್ಷದ ಶಾಸಕರ ಹಕ್ಕುಚ್ಯುತಿ ಮಾಡುವ ಕಾರ್ಯವನ್ನು ರಾಜ್ಯ ಸರಕಾರ ಅಧಿಕಾರಿಗಳ ಮುಖೇನ ಮಾಡುತ್ತಿದೆ. ಇಂತಹ ಎರಡು ಮೂರು ಘಟನೆಗಳು ದ.ಕ.ಜಿಲ್ಲೆಯಲ್ಲಿ ನಡೆದಿದೆ. ಸರಕಾರ ಗೂಂಡಾಗಿರಿಯ ಪ್ರವೃತ್ತಿ ನಡೆಸುತ್ತಿದೆ. ಅಧಿಕಾರಿಗಳ ಮೂಲಕ ಶಾಸಕರ ಹಕ್ಕುಚ್ಯುತಿ ಮಾಡಿ ಶಾಸಕರಿಗೇ ಮರ್ಯಾದೆ ನೀಡದಿರುವ ಈ ಸರಕಾರ ಜನಸಾಮಾನ್ಯರಿಗೆ ಮರ್ಯಾದೆ ಕೊಡುತ್ತದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ದ.ಕ.ಜಿಲ್ಲೆಯ ಬಿಜೆಪಿಯ ಆರೂ ಶಾಸಕರ ಕ್ಷೇತ್ರದಲ್ಲಿ ಹಸ್ತಕ್ಷೇಪಗಳಾಗಿವೆ. ಸಿಎಂ ಅವರು ನಡೆಸಿದ್ದ ಕೆಡಿಪಿ ಸಭೆಯಲ್ಲಿ ಶಾಸಕರ ಹಕ್ಕುಚ್ಯುತಿ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ದೂರಿದ್ದರು. ಈ ಸಂದರ್ಭ ಸಿಎಂ ಸಿದ್ದರಾಮಯ್ಯನವರು ಯಾಕೆ ಇದು ಆಗಿದೆ ಎಂದು ಹೇಳಿ ಯಾವ ಶಾಸಕರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಆ ಬಳಿಕ ಹಿಂದಿನ ಬಾಗಿಲಿನಿಂದ ತಮ್ಮ ಆಟವನ್ನು ಆಡಿದ್ದಾರೆ ಎಂದರು.
ಆದ್ದರಿಂದ ಇಂದಿನವರೆಗೆ ಸಸ್ಪೆಂಡ್ ಆಗಿರುವ ಅಧಿಕಾರಿಗಳನ್ನು ವಾಪಸ್ ತೆಗೆದುಕೊಳ್ಳುವ ಕೆಲಸ ಆಗಿಲ್ಲ. ಆದ್ದರಿಂದ ಸಿಎಂಗೆ ಮನವಿ ಮಾಡಿದರೂ ನ್ಯಾಯ ಸಿಗದ ಕಾರಣ ಬಿಜೆಪಿ ಶಾಸಕರು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಜಿಲ್ಲಾಧಿಕಾರಿಯವರು ಎಲ್ಲವನ್ನೂ ಸರಿಪಡಿಸುತ್ತೇನೆಂದು ಭರವಸೆ ಮಾಡಿದ್ದಾರೆ. ಅವರ ಭರವಸೆ ಮೇರೆಗೆ ಪ್ರತಿಭಟನೆ ಮೊಟಕುಗೊಳಿಸಲಾಗುತ್ತದೆ. ಅವರು ನೀಡಿದ ಭರವಸೆ ಈಡೇರದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಯೋಚನೆ ಮಾಡಲಾಗುತ್ತದೆ. ಇದು ಸರಕಾರಕ್ಕೆ ಮೊದಲ ಎಚ್ಚರಿಕೆ, ಇನ್ನೂ ಸರಿಯಾಗದಿದ್ದಲ್ಲಿ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.