ಮಂಗಳೂರು, ಮೇ 26 : ಭಜರಂಗದಳ, ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತೆ. ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ ಇದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನ ಬಂಧಿಸಿ. ನಿಮ್ಮ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ತಾನ ಪರ ಘೋಷಣೆ ಬಂದಿದೆ. ಅದು ಬಿಟ್ಟು ರಾಜ್ಯವನ್ನ ವಿಭಜನಾವಾದದ ಮೂಲಕ ಕಟ್ಟೋದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆರ್‌ಎಸ್‌ಎಸ್ ಈ ದೇಶದಲ್ಲಿ ರಾಷ್ಟ್ರ ಭಕ್ತಿ ಕಲಿಸಿದೆ. ಕೇಂದ್ರದ ಮಂತ್ರಿಗಳು, ನಾವೆಲ್ಲರೂ ಆರ್.ಎಸ್.ಎಸ್ ಸ್ವಯಂ ಸೇವಕರು. ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ನರಸಿಂಹ ರಾವ್ ಸರ್ಕಾರ, ಯಾವಾಗೆಲ್ಲಾ ಕಾಂಗ್ರೆಸ್ ಸರ್ಕಾರ ಇತ್ತೋ ಆಗೆಲ್ಲಾ ಇದಾಗಿದೆ. ನಿಷೇಧದ ಕೆಲಸ ಮಾಡಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಬಂದಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಬಾಯಿಗೆ ಹಿಡಿತ ಇಟ್ಟುಕೊಂಡು, ನಾಲಿಗೆ ಹಿಡಿತದಲ್ಲಿ ಮಾತನಾಡಲಿ. ಭಜರಂಗದಳ, ಆರ್.ಎಸ್.ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ. ಪಿಎಫ್ಐ ಅನ್ನ ನಾವು ನಿಷೇಧ ಮಾಡಿದ್ದೇವೆ, ಇವರೇನು ನಿಷೇಧ ಮಾಡೋದು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಆರ್‌ಎಸ್‌ಎಸ್ ರಾಷ್ಟ್ರಭಕ್ತಿ ಸಂಕೇತ ಅಂತ ಕಾಂಗ್ರೆಸ್ ನಲ್ಲೇ ಹೇಳಿದ್ದಾರೆ. ವಿಧಾನಸೌಧದಲ್ಲಿ ಡಿಕೆಶಿಯವರೇ ಪ್ರಾರ್ಥನೆ ಹೇಳಿದ್ದಾರೆ, ಅದರಲ್ಲೇ ಇದೆ. ಆ ಪ್ರಾರ್ಥನೆಯಲ್ಲಿ ಏನಿದೆ ಅಂತ ಖರ್ಗೆಯವರು ಡಿಕೆಶಿ ಬಳಿ ಕೇಳಲಿ. ರಾಜ್ಯವನ್ನು ದ್ವೇಷ, ವಿಭಜನೆ ಮೂಲಕ ಕಾಂಗ್ರೆಸ್ ಆಡಳಿತ ಮಾಡ್ತಿದೆ. ಇವರ ಮಂತ್ರಿ ಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತೆ. ಇದರ ಭಯದಲ್ಲಿ ಆರ್‌ಎಸ್‌ಎಸ್ ಹೆಸರಲ್ಲಿ ಕಾಂಗ್ರೆಸ್ ಗಟ್ಟಿ ಮಾಡ್ತಾ ಇದ್ದಾರೆ. ಇವರ ಜಗಳ ಹೊರ ಬಾರದಂತೆ ಮಾಡಲು ಇದು ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.