ವರದಿ:ಬಂಗಾರಪ್ಪ ಸಿ ಹನೂರು . ಹನೂರು:ಶ್ರಮಪಟ್ಟಂತಹ ಎಲ್ಲಾ ಕಾರ್ಯಕರ್ತರಿಗೂ ನಾನು ಅಭಾರಿಯಾಗಿದ್ದಿನಿ ತಾವೆಲ್ಲರು ನಾನು ಸೋತಿದ್ದೇನೆ ಎಂದು ಧೃತಿಗೆಡಬೇಡಿ. ಇಂದಿನ ಸೋಲು ಮುಂದಿನ ಗೆಲುವು ಎಂದು ಭಾವಿಸಿ ಪಕ್ಷವನ್ನು ಮತ್ತಷ್ಟು ಗಟ್ಟಿ ಗೊಳಿಸಲು ತಳಮಟ್ಟದಿಂದ ಕಟ್ಟಲು ಶ್ರಮಿಸುವ ಮೂಲಕ ಮುಂಬರುವ ಜಿ.ಪಂ.ಮತ್ತು ತಾ.ಪಂ.ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಎಂದು ಆರ್.ನರೇಂದ್ರ ತಿಳಿಸಿದರು. ಹನೂರು ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸುಸಂದರ್ಭದಲ್ಲಿ ನಾವು ಸೋತಿರುವುದರಿಂದ ಬೇಸರದ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿದೆ. ನೀರಾವರಿ, ರಸ್ತೆಗಳು ಸೇರಿದಂತೆ ಅನೇಕ ಮಹತ್ತರದ ಅಭಿವೃದ್ಧಿ ಯೋಜನೆಗಳ ನನ್ನ ಕನಸನ್ನು ಕಟ್ಟಿಕೊಂಡಿದ್ದೆ ಆದರೆ ಮತದಾರರು ಬೆಂಬಲ ನೀಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ. ಕಳೆದ ಬಾರಿಯಂತೆ ನಮಗೆ ಈ ಬಾರಿಯು ಮತಗಳು ಲಭಿಸಿವೆ ಪಕ್ಷ ತಾಯಿ ಇದ್ದಂತೆ. ನಾನು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಅಭ್ಯರ್ಥಿ ಮತಗಳಿಸಲು ವಿಫಲವಾದ್ದರಿಂದ ನಮಗೆ ಸೋಲುಂಟಾಗಿದೆ. ಮುಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನೂತನ ಕ್ಯಾಟಗಿರಿ ಪ್ರಕಟಗೊಳ್ಳಲಿದ್ದು, ಗೆದ್ದಂತಹವರು ಅಧ್ಯಕ್ಷರ ಗಾದಿಗೂ ಕೈ ಹಾಕುವ ಸಾಧ್ಯತೆ ಇರುವುದರಿಂದ ನಮ್ಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ ಇತರೆ ಪಕ್ಷಗಳ ಬೆಂಬಲಿತ ಅಧ್ಯಕ್ಷರ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದ ಅವರು ಕಳೆದ 15 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಮಾಧ್ಯಮ ಮಿತ್ರರಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು. ಎಂ.ಎಲ್.ಸಿ, ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯ: ಕೃತಜ್ಞತಾ ಸಮಾರಂಭದಲ್ಲಿ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರುಗಳು ಒಕ್ಕೊರಲ್ಲಿನಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ಆರ್.ನರೇಂದ್ರ ಅವರು ಗಳಿಸಿರುವ ಮತಗಳನ್ನು ಪರಿಗಣಿಸಿ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಬೇಕು. ಸೋತಿದ್ದರು ಕೂಡ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಬೇಕು ಅಥವಾ ಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಕಾರ್ಯಕರ್ತರು ಭಾವೋದ್ವೇಗಕ್ಕೆ ಒಳಗಾಗಿ ಸೋತರು ನಮ್ಮ ಮಂತ್ರಿ ಆರ್.ನರೇಂದ್ರ ಅವರೇ ಎಂದು ಜಯಕಾರದ ಘೋಷಣೆಗಳನ್ನು ಕೂಗಿ ತಮ್ಮ ಅಭಿಮಾನದ ಪರಕಾಷ್ಠೆ ಮೆರೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.