ಭಾಲ್ಕಿ: ಕಚುಸಾಪ ಹುಬ್ಬಳ್ಳಿ ದಶಮಾನೋತ್ಸವ ಸಂಭ್ರಮ, ರಾಜ್ಯಮಟ್ಟದ ೧೦ ಸಮ್ಮೇಳನ ಪೂರೈಸಿ ಇದೀಗ ೧೧ ರತ್ತ ದಾಪುಗಾಲು, ಮೇ ೨೫ಕ್ಕೆ ಭಾಲ್ಕಿ ಹಿರೇಮಠದ ಸಂಸ್ಥಾನದ ಅಡಿಯಲ್ಲಿ ಸಮ್ಮೇಳನ ಜರುಗಲಿದೆ. ಕನ್ನಡ ನಾಡಿನ ವೈಚಾರಿಕ ಚಿಂತಕರು, ಸಾಹಿತಿಗಳಾದ ಪರಮ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಚುಸಾಪ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಪರಮ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೆವರು ತಿಳಿಸಿದರು.
ಹಿರೇಮಠ ಸಂಸ್ಥಾನದ ಆವರಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಹಾಗೂ ತಾಲೂಕು ಘಟಕಗಳ ವತಿಯಿಂದ ಆಯೋಜಿಸಿದ್ದ ಸಭೆಯ ಸಾನ್ನಿಧ್ಯ, ನೇತೃತ್ವವನ್ನು ವಹಿಸಿ ಮಾತನಾಡಿದ ಶ್ರೀಗಳು ಶಿವ ಸಂಚಾರ ತಂಡದ ಮೂಲಕ ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಆಯ್ಕೆ ಬಹಳ ಸಂತೋಷ ತಂದಿದೆ. ವಚನ ಚುಟುಕು ಸಾಹಿತ್ಯದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ತರಳಬಾಳು ಖ್ಯಾತಿ ಶಾಖಾಮಠದ ಜವಾಬ್ದಾರಿ ಹೊತ್ತುಕೊಂಡು ಜನಪರ ನಿಸ್ವಾರ್ಥ ಸೇವಾ ಕೈಂಕರ್ಯಗಳು ಮಾಡುತ್ತಿದ್ದಾರೆ. ಬಸವತತ್ವ ಅನುಷ್ಟಾನಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಪೂಜ್ಯರು ಉತ್ತಮ ವಾಗ್ಮಿಗಳಾಗಿದ್ದಾರೆ.ಈ ಸಮ್ಮೇಳನ ಭಾಲ್ಕಿ ಹಿರೇಮಠ ಸಂಸ್ಥಾನದ ಅಡಿಯಲ್ಲಿ ಆಗುತ್ತಿರುವುದು ಹೆಮ್ಮೆಯ ಸಂಗತಿ, ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಈ ಮೂಲಕ ಮಾದರಿ ಸಮ್ಮೇಳನ ಮಾಡೋಣ ಎಂದರು.
ಸಭೆಯ ಸಮ್ಮುಖ ವಹಿಸಿದ್ದ ಪರಮ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ ಚುಟುಕು ಸಾಹಿತ್ಯ ಪರಿಷತ್ತು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಹತ್ತು ಸಮ್ಮೇಳನಗಳು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ.ಹನ್ನೊಂದನೇ ಸಮ್ಮೇಳನ ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಹಮ್ಮಿಕೊಂಡಿದ್ದೇವೆ. ಇದಕ್ಕೆ ಸರ್ವರ ಸಹಕಾರ ಅಗತ್ಯ, ಈ ನಿಟ್ಟಿನಲ್ಲಿ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಅಷ್ಟೇ ವ್ಯವಸ್ಥಿತವಾಗಿ ಸಮ್ಮೇಳನ ಮಾಡೋಣ. ಪ್ರಚಾರ ಕಾರ್ಯ ಸುಸೂತ್ರವಾಗಿ ಸಾಗಲಿ. ಚನ್ನಬಸವ ಆಶ್ರಮದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ದೂರವಾಣಿ ಮುಖಾಂತರ ಮಾತನಾಡಿದ ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಸರಕಾರದ ಯಾವುದೇ ಅನುದಾನವಿಲ್ಲದೇ ನಿರಂತರವಾಗಿ ೧೦ ರಾಜ್ಯಮಟ್ಟದ, ೫ ರಾಜ್ಯಮಟ್ಟದ ಲೇಖಕಿಯರ, ೫ ಶಿಕ್ಷಕ ಸಾಹಿತಿಗಳ ಸಮ್ಮೇಳನ ಪೂರೈಸಿದ ಕಚುಸಾಪ ಸಾಹಿತಿಗಳು, ಸಾಹಿತ್ಯಾಸಕ್ತರ ಮಠಗಳ ಸಹಕಾರದಲ್ಲಿ ಸಾಹಿತ್ಯ ಕಾರ್ಯವನ್ನು ನಿರ್ವಹಿಸುತ್ತದೆ. ಇದುವರೆಗೆ ೧.೫ ಲಕ್ಷ ಪುಸ್ತಕ ಕೊಡುಗೆ ನೀಡಿದೆ. ರಾಜ್ಯದ ೨೬ ಜಿಲ್ಲೆಯಲ್ಲಿ ಮುಂಬೈ, ಕಾಸರಗೋಡು, ಅಕ್ಕಲಕೋಟೆ ಗೋವಾ ದಲ್ಲಿ ಘಟಕ ಹೊಂದಿದೆ. ಹಾಗಾಗಿ ಈದಿಗ ಹನ್ನೊಂದನೆಯ ಸಮ್ಮೇಳನಕ್ಕೆ ಸಜ್ಜಾಗಿದ್ದೇವೆ. ಈ ಸಮ್ಮೇಳನಕ್ಕೆ ತಮ್ಮೆಲ್ಲರ ಹಾರೈಕೆ ಇರಲೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿಗಳು ಆದ ಜಿಲ್ಲಾಧ್ಯಕ್ಷ ಸಂಗಮೇಶ ಎನ್ ಜವಾದಿ ರವರು ಸಮ್ಮೇಳನ ಸಂಪೂರ್ಣವಾಗಿ ಪರಮ ಪೂಜ್ಯ ಡಾ. ಬಸವಲಿಂಗ ಪಟ್ಟದೇವರ ಸಾನಿಧ್ಯ, ನೇತೃತ್ವದಲ್ಲಿ ಸಾಗಲಿದೆ. ಅದೇ ರೀತಿ ಪರಮ ಪೂಜ್ಯ ಗುರುಬಸವ ಪಟ್ಟದೇವರ ಸಾರಿಥ್ಯದಲ್ಲಿ ಸಾಗಿ ಬರಲಿದೆ. ಕನ್ನಡ ನಾಡಿನ ವೈಚಾರಿಕ ಚಿಂತಕರು, ಸಾಹಿತಿಗಳಾದ ಪರಮ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಸಮ್ಮೇಳನದ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲಿದೆ. ಸಮ್ಮೇಳನದಲ್ಲಿ ಉದ್ಘಾಟನೆ, ಕವಿ ಮತ್ತು ವಿಚಾರ ಗೋಷ್ಠಿ, ಸರ್ವಾಧ್ಯಕ್ಷರ ಬದುಕು ಬರಹ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿ ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲರ ಸಹಕಾರ, ಆಶೀರ್ವಾದ, ಮಾರ್ಗದರ್ಶನ ಇರಲೆಂದು ವಿನಂತಿಸಿದರು.
ಕಚುಸಾಪ ಭಾಲ್ಕಿ ತಾಲೂಕು ಅಧ್ಯಕ್ಷ ಕಾಶಿನಾಥ ಬುರೆ ಸ್ವಾಗತಿಸಿದರು.
ಸಭೆಯಲ್ಲಿ ಪರಮ ಪೂಜ್ಯ ಮಾಹಾಲಿಂಗ ಶ್ರೀಗಳು, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ರಾಜಶೇಖರ ಮಠಪತಿ, ಕಚುಸಾಪ ಬಸವಕಲ್ಯಾಣ ತಾಲೂಕು ಅಧ್ಯಕ್ಷ ವಿಶ್ವನಾಥ ಮುಕ್ತಾ, ಕಮಲನಗರ ತಾಲೂಕು ಅಧ್ಯಕ್ಷ ಸಂಗಮೇಶ ಮುರ್ಕೇ,ಚಿಟಗುಪ್ಪ ತಾಲೂಕು ಪ್ರತಿನಿಧಿ ಎನ್ ಎಸ್ ಮಲ್ಲಶೆಟ್ಟಿ, ಗುಂಡಪ್ಪ ಸಂಗಮಕರ್, ಶಿವಕುಮಾರ್ ಘಂಟೆ,ನಾಗಶೆಟ್ಟೆಪ್ಪಾ ಲಂಜವಾಡೆ, ಶಾಂತಯ್ಯ ಸ್ವಾಮಿ, ಸಂತೋಷ ಹಡಪದ, ಮೀನಾಕ್ಷಿ ಪ್ರಭಾ,ಶಂಕುತಲಾ ರಾಜಕುಮಾರ ಸೇರಿದಂತೆ ತಾಲೂಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಸಾಹಿತಿಗಳು, ಗಣ್ಯರು ಹಾಜರಿದ್ದರು.