ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ತಮ್ಮ 76ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಚಂದನವನದ ಖ್ಯಾತ ಹಾಸ್ಯನಟನ ನಿಧನಕ್ಕೆ ಸಂತಾಪ ವ್ಯಕ್ತವಾಗುತ್ತಿದೆ.
ಸಂಜೆ ಅಂತ್ಯಕ್ರಿಯೆ: ಬಹುದಿನಗಳಿಂದ ವಯೋಸಹಜ ಕಾಯಿಲೆ ವಿರುದ್ಧ ಹೋರಾಡುತ್ತಿದ್ದ ಜನಪ್ರಿಯ ನಟ ಮುಂಜಾನೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಗಳು ಸೂಚಿಸಿವೆ.
ಕಿರುತೆರೆ to ಹಿರಿತೆರೆ: 80-90ರ ದಶಕದ ಸಂದರ್ಭ ಬೇಡಿಕೆ ಹೊಂದಿದ್ದ ಇವರು ಶ್, ತರ್ಲೆ ನನ್ಮಗ, ನ್ಯೂಸ್ನಂತಹ ಹಿಟ್ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪಾಪ ಪಾಂಡು, ಮಾಂಗಲ್ಯ, ಜೋಕಾಲಿ, ರೋಬೋ ಫ್ಯಾಮಿಲಿಯಂತಹ ಸಾಲು ಸಾಲು ಸೀರಿಯಲ್ಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ.
1949ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದ ಬ್ಯಾಂಕ್ ಜನಾರ್ಧನ್, ಕಾಮಿಡಿ ರೋಲ್ಗಳ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು. ನೂರಾರು ಚಿತ್ರಗಳಲ್ಲಿನ ಅಭಿನಯ ಇವರಿಗೆ ವಿಭಿನ್ನ ಜನಪ್ರಿಯತೆ ತಂದುಕೊಟ್ಟಿತ್ತು. ಗಣೇಶ ಸುಬ್ರಮಣ್ಯ, ಪೊಲೀಸನ ಹೆಂಡತಿ, ಚೆಲುವ, ದೇವ, ರಂಬೆ ಊರ್ವಶಿ ಮೇನಕೆ, ಮಿಸ್ಟರ್ ಬಕ್ರ, ರಕ್ತ ಕಣ್ಣೀರು, ರಂಗ ಎಸ್ಎಸ್ಎಲ್ಸಿ, ಇತ್ತೀಚಿನ ವರ್ಷಗಳಲ್ಲಿ ಪವರ್, ಕೋಟಿಗೊಬ್ಬ 2 ಸೇರಿ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಚ್ಡಿಕೆ ಸಂತಾಪ: ಜನಪ್ರಿಯ ನಟನ ನಿಧನಕ್ಕೆ ಕನ್ನಡ ಚಿತ್ರರಂಗ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.”ಕನ್ನಡ ಚಿತ್ರರಂಗದ ಹಿರಿಯ ನಟರು, ಸುಮಾರು ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅನೇಕ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ಧ ಬ್ಯಾಂಕ್ ಜನಾರ್ಧನ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ತಮ್ಮ ಅಭಿನಯದಿಂದ ಪ್ರೇಕ್ಷಕರಲ್ಲಿ ಕಚಗುಳಿಯ ಕಡಲನ್ನೇ ಉಕ್ಕಿಸುತ್ತಿದ್ದ ಜನಾರ್ಧನ್ ಅವರು, ಪ್ರತೀ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಆ ಪಾತ್ರದ ಮೂಲಕ ಎಲ್ಲರನ್ನೂ ಸಮ್ಮೋಹನಗೊಳಿಸುತ್ತಿದ್ದರು. ಅವರ ನಿಧನ ನಮ್ಮ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.