ಎ.ಆರ್.ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಈದ್ ಉಡುಗೊರೆಯಾಗಿ ಮಾರ್ಚ್ 30, 2025ರಂದು ಚಿತ್ರಮಂದಿರ ತಲುಪಿತು. ಇದೇ ಮೊದಲ ಬಾರಿಗೆ ತೆರೆಹಂಚಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಸೌತ್ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅವರ ಚಿತ್ರ ಅದ್ಭುತ ಅಂಕಿ-ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ, ಚಿತ್ರ ಭಾನುವಾರ ಬಿಡುಗಡೆಯಾದ್ರೂ ಸಾಧಾರಣ ಅಂಕಿ – ಅಂಶದೊಂದಿಗೆ ಕಲೆಕ್ಷನ್ ಪ್ರಾರಂಭಿಸಿದೆ.
ಹುಸಿಯಾಯ್ತು ನಿರೀಕ್ಷೆಗಳು: ಸಲ್ಮಾನ್, ರಶ್ಮಿಕಾ ಜೊತೆಗೆ, ಕಾಜಲ್ ಅಗರ್ವಾಲ್, ಸತ್ಯರಾಜ್ ಮತ್ತು ಶರ್ಮಾನ್ ಜೋಶಿ ಅವರಂತಹ ಖ್ಯಾತ ನಟರು ಪ್ರಮುಖ ಪಾತ್ರ ವಹಿಸಿರುವ ಈ ಚಿತ್ರ ದೇಶೀಯ ಮಾರುಕಟ್ಟೆಯಲ್ಲಿ 26 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಸಲ್ಮಾನ್, ರಶ್ಮಿಕಾ ಸೂಪರ್ ಹಿಟ್ ಸಿನಿಮಾಗಳ ದಾಖಲೆ ಮತ್ತು ದೊಡ್ಡ ಅಭಿಮಾನಿ ಬಳಗ ಹೊಂದಿರುವುದರಿಂದ ಈ ಸಿನಿಮಾದ ಮೊದಲ ದಿನದ ಗಳಿಕೆ ಬಹಳ ದೊಡ್ಡ ಮಟ್ಟದಲ್ಲಿರಲಿದೆ ಎಂದು ಊಹಿಸಲಾಗಿತ್ತು.
ಸಿಕಂದರ್ ಮೊದಲ ದಿನದ ಬಾಕ್ಸ್ ಆಫೀಸ್ ನಿರೀಕ್ಷೆ ಮತ್ತು ಕಲೆಕ್ಷನ್: ಈದ್ ಹಬ್ಬದಂದು ಬಿಡುಡೆಯಾದ ಸಲ್ಮಾನ್ ಖಾನ್ ಅವರ ಹಿಂದಿನ ಯಶಸ್ಸು ಪರಿಗಣಿಸಿ, ಸಿನಿಮಾ ಟ್ರೇಡ್ ವಿಶ್ಲೇಷಕರು ಆರಂಭಿಕ ಕಲೆಕ್ಷನ್ 40-45 ಕೋಟಿ ರೂ.ಗಳಾಗಬಹುದು ಎಂದು ಅಂದಾಜಿಸಿದ್ದರು. ಅದಾಗ್ಯೂ, ಸಂಡೇ ರಿಲೀಸ್ ಸ್ಟ್ರ್ಯಾಟಜಿ ವಿಫಲವಾಗಿದೆ. ಭಾರತೀಯ ಬಾಕ್ಸ್ ಆಫೀಸ್ನಲ್ಲಿ 26 ಕೋಟಿ ರೂ.ಗಳೊಂದಿಗೆ ಸಿಕಂದರ್ ತನ್ನ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಇನ್ನು ವಾರದ ದಿನಗಳಾದ ಹಿನ್ನೆಲೆ, ಈ ಅಂಕಿ – ಅಂಶ ಕುಗ್ಗುವ ಸಾಧ್ಯತೆ ಹೆಚ್ಚಿದೆ.
ಸಿಕಂದರ್ ಸಾಧಾರಣ ಪ್ರದರ್ಶನ: ಕಳೆದೊಂದು ದಶಕದಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಈದ್ ಬಿಡುಗಡೆಗಳ ಪೈಕಿ, ತನ್ನ ಮೊದಲ ದಿನ ಅತಿ ಕಡಿಮೆ ಕಲೆಕ್ಷನ್ ಮಾಡಿದ ಚಿತ್ರಗಳಲ್ಲೊಂದಾಗಿದೆ. 2023ರಲ್ಲಿ ಬಿಡುಗಡೆಯಾದ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರವನ್ನು ಹೊರತುಪಡಿಸಿ ಉಳಿದ ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿವೆ. ಉದಾಹರಣೆಗೆ, ಟೈಗರ್ 3 (2023) ತನ್ನ ಮೊದಲ ದಿನ 43 ಕೋಟಿ ರೂಪಾಯಿ., ಭಾರತ್ (2019) – 42.30 ಕೋಟಿ ರೂಪಾಯಿ, ಪ್ರೇಮ್ ರತನ್ ಧನ್ ಪಾಯೋ (2015) – 40.35 ಕೋಟಿ ರೂಪಾಯಿ, ಟೈಗರ್ ಜಿಂದಾ ಹೈ (2017) – 34.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 13.5 ಕೋಟಿ ರೂಪಾಯಿಯೊಂದಿಗೆ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ್ದು ಬಿಟ್ಟರೆ ಈ ಹಿಂದಿನ ಎಲ್ಲಾ ಚಿತ್ರಗಳು ಸಿಕಂದರ್ಗಿಂತ ಉತ್ತಮವಾಗಿ ಕಲೆಕ್ಷನ್ ಮಾಡಿವೆ.