ಬೆಂಗಳೂರು,ಮಾ.28(Zoom Karnataka): ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಚಾಲನೆ ನೀಡಿದರು.
ಬೆಂಗಳೂರಿನ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ 14 ದೇವಾಲಯಗಳನ್ನು ಆಯ್ಕೆ ಮಾಡಿ ಪ್ರಾಯೋಗಿಕ ಪ್ರಸಾದ ಸೇವೆಗೆ ಚಾಲನೆ ನೀಡಲಾಗಿದೆ.
ಇ-ಪ್ರಸಾದ ತರಿಸಿಕೊಳ್ಳಬಹುದಾದ ದೇವಾಲಯಗಳು:
- ಶ್ರೀ ವಿನಾಯಕಸ್ವಾಮಿ ದೇವಾಲಯ ಜಯನಗರ, ಬೆಂಗಳೂರು
- ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನ, ಮಂಡ್ಯ ಜಿಲ್ಲೆ
- ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡು, ಮೈಸೂರು
- ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಮಾಲೂರು, ಕೋಲಾರ ಜಿಲ್ಲೆ
- ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಹಲಸೂರು, ಬೆಂಗಳೂರು
- ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು, ಉಡುಪಿ ಜಿಲ್ಲೆ
- ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಗವಿಪುರ, ಬೆಂಗಳೂರು
- ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೀದರ್
- ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಸವದತ್ತಿ, ಬೆಳಗಾವಿ
- ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ದಕ್ಷಿಣ ಕನ್ನಡ
- ಶ್ರೀ ಕನಕದುರ್ಗಮ್ಮ ದೇವಸ್ಥಾನ, ಬಳ್ಳಾರಿ
- ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ವಿಜಯನಗರ ಜಿಲ್ಲೆ
- ಶ್ರೀ ಹುಲಿಗೆಮ್ಮ ದೇವಾಲಯ, ಕೊಪ್ಪಳ
- ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಸ್ಥಾನ, ಕಲಬುರಗಿ
ಇವುಗಳಲ್ಲದೆ ಇನ್ನೂ 14 ದೇವಾಲಯಗಳ ಪ್ರಸಾದ ಸೇವೆಯನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಮುಜರಾಯಿ ಇಲಾಖೆಯ ಪ್ರಮುಖ ದೇವಾಲಯಗಳ ಪ್ರಸಾದವನ್ನು ಭಕ್ತರ ಮನೆಬಾಗಿಲಿಗೆ ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸ್ ಇಂಡಿಯಾ CSC e-Governance Services India Limited ಸಹಯೋಗದೊಂದಿಗೆ ಅನುಷ್ಠಾನಗೊಳಿಸಿ ಜಾರಿಗೆ ತರಲಾಗುತ್ತಿದೆ. ಈ ದೇವಾಲಯಗಳಲ್ಲಿ ಕಲ್ಲುಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಕುಂಕುಮ, ಬಿಲ್ವಪತ್ರೆ, ಹೂವು, ತುಳಸಿ ಮತ್ತು ದೇವಾಲಯದ ಸ್ತೋತ್ರಗಳನ್ನು ತರಿಸಿಕೊಳ್ಳಬಹುದು.