ಬೆಂಗಳೂರು,ಮಾ.19 (Zoom Karnataka): ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ಖಾಲಿಯಿದ್ದ ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿರುವ ಅಕ್ರಮಗಳ ಕುರಿತಂತೆ ತನಿಖೆಗೆ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಏಕೆ ವಹಿಸಬಾರದು ಎಂದು ಹೈಕೋರ್ಟ್ ಪ್ರಶ್ನಿಸಿತು.
ಸಹಾಯಕ ಎಂಜಿನಿಯರ್ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಆದೇಶ ಪ್ರಶ್ನಿಸಿ, ಎಂಜಿನಿಯರ್ಗಳಾದ ವಿಶ್ವಾಸ್ ಮತ್ತಿತರರು ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿತು.
ತಕ್ಷಣ ಸೊಕ್ಕಿನ ನಡತೆ ಬಿಡಬೇಕು: ಅಲ್ಲದೆ, ನಾವು ಏನು ಮಾಡಿದರೂ ನಡೆದು ಹೋಗುತ್ತದೆ ಎಂಬ ಸೊಕ್ಕಿನ ನಡತೆಯನ್ನು ಸಂಬಂಧಪಟ್ಟವರು ತಕ್ಷಣ ಬಿಡಬೇಕು. ಅಲೆಕ್ಸಾಂಡರ್ನಂಥವನೂ ಕಾಲಗರ್ಭದಲ್ಲಿ ಮುಗಿದು ಹೋಗಿದ್ದಾನೆ. ಏನು ಮಾಡಿದರೂ ನಾವು ಬಿಡಲ್ಲ. ಸಂಬಂಧಿತರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಸರ್ಕಾರ ಮತ್ತು ಕೆಪಿಎಸ್ಸಿ ಪದೇ ಪದೆ ಕಾಲಾವಕಾಶ ಕೋರದೆ, ನಾಳೆಯೇ ಎಲ್ಲ ದಾಖಲೆಗಳನ್ನು ತನ್ನಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.
ಪ್ರಕರಣದಲ್ಲಿ ಸಿಒಡಿ, ಸಿಐಡಿಯಿಂದ ಏನೂ ಮಾಡಲಾಗುವುದಿಲ್ಲ. ಏಕೆಂದರೆ ಅವೆಲ್ಲವೂ ರಾಜ್ಯ ಸರ್ಕಾರದ ನಿಯಂತ್ರಣದಲ್ಲೇ ಇರುತ್ತವೆ. ಬೇರೆ, ಬೇರೆ ರಾಜ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಯಾರ ಕಡೆಯಿಂದ ತನಿಖೆ ಮಾಡಿಸಲಾಗಿದೆ ಎಂಬುದರ ಮಾಹಿತಿಯನ್ನು ಒದಗಿಸಬೇಕು. ಪ್ರಕರಣದಲ್ಲಿ ಸಿಬಿಐ ಅನ್ನು ಪ್ರತಿವಾದಿಯಾಗಿ ಮಾಡಲು ಯಾರಿಗಾದರೂ ಆಕ್ಷೇಪಣೆ ಇದೆಯೇ? ಎಂದು ಪೀಠ ಪ್ರಶ್ನಿತು.
ಸೂಕ್ತ ಸಂದರ್ಭದಲ್ಲಿ ಅರ್ಹ ನಿರ್ಧಾರ-ಹೈಕೋರ್ಟ್: ಇದಕ್ಕೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಆಕ್ಷೇಪಿಸಿದರು. ಈ ವೇಳೆ ಪೀಠ, ”ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಯಾಗಿರುವ ಎಲ್ಲರಿಗೂ ತಿಳಿಸುವುದೇನೆಂದರೆ ಸೂಕ್ತ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್ ಸ್ಥಾಪನಾ ಕಾಯಿದೆ ಅಡಿ ಸಿಬಿಐಗೆ ನೀಡುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಈ ಸಂಬಂಧ ಪಕ್ಷಗಾರರು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅರ್ಹ ನಿರ್ಧಾರವನ್ನು ಸೂಕ್ತ ಸಂದರ್ಭದಲ್ಲಿ ಕೈಗೊಳ್ಳಲಾಗುವುದು” ಎಂದು ತಿಳಿಸಿತು.
ರಾಜ್ಯ ಸರ್ಕಾರಕ್ಕೆ ಎಲ್ಲಾ ಮಾಹಿತಿ: ವಿಚಾರಣೆ ವೇಳೆ ಕೆಪಿಎಸ್ಸಿ ಪರ ವಕೀಲರು, ”ಸಹಾಯಕ ಎಂಜಿನಿಯರ್ ನೇಮಕಾತಿಯಲ್ಲಿನ ಹಗರಣದ ತನಿಖೆಗಾಗಿ ಕೆಪಿಎಸ್ಸಿಯ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲಿಖಿತವಾಗಿ 2024ರ ಫೆಬ್ರವರಿ 2ರಂದು ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿತ್ತು. ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಲು ಕೆಪಿಎಸ್ಸಿ ಕಾರ್ಯದರ್ಶಿಗೆ ನಿರ್ಣಯದ ಮೂಲಕ ಕೆಪಿಎಸ್ಸಿಯು ತಿಳಿಸಿತ್ತು. ಆದರೆ, ಅವರು ಎಫ್ಐಆರ್ ದಾಖಲಿಸಿರಲಿಲ್ಲ. ಈ ಎಲ್ಲಾ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿತ್ತು” ಎಂದು ವಿವರಿಸಿದರು.