ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ವಿರಾಟ್ ಕೊಹ್ಲಿ ಶತಕದಾಟ, ಶ್ರೇಯಸ್ ಅಯ್ಯರ್ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದೆ.
ದುಬೈ ಮೈದಾನದಲ್ಲಿ ಭಾನುವಾರ ನಡೆದ ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 241 ರನ್ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ಸೌದ್ ಶಕೀಲ್ (62) ಅರ್ಧಶತಕ ಸಿಡಿಸಿದರೆ, ರಿಜ್ವಾನ್ 46 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಬ್ಯಾಟಿಂಗ್ ನೆರವಿನಿಂದ ಪಾಕ್ ಸಾಮಾನ್ಯ ಗುರಿಯನ್ನು ಕಲೆಹಾಕಿತ್ತು. ಈ ಗುರಿಯನ್ನು ಪಡೆದ ಭಾರತ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ನೆರವಿನಿಂದ ಸುಲಭವಾಗಿ ಗೆಲುವು ಸಾಧಿಸಿತು. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ವಿರಾಟ್ ಕೊಹ್ಲಿ 51ನೇ ಶತಕ : ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ಗೆ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊನೆವರೆಗೂ ಕ್ರೀಸ್ನಲ್ಲಿದ್ದು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ತಮ್ಮ ಇನ್ನಿಂಗ್ಸ್ನಲ್ಲಿ 111 ಎಸೆತಗಳಲ್ಲಿ 7 ಬೌಂಡರಿ ಸಮೇತ 100 ರನ್ ಬಾರಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 51ನೇ ಶತಕವನ್ನು ಪೂರ್ಣಗೊಳಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ (56) ಕೂಡ ಉತ್ತಮ ಸಾಥ್ ನೀಡಿ ಅರ್ಧಶತಕ ಸಿಡಿಸಿದರು.
ಅರ್ಧಶತಕ ವಂಚಿತ : ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ರೊಹಿತ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆರಂಭಿಸಿದರು. ಆದರೆ 46 ರನ್ಗಳಿಸಿದ್ದ ವೇಳೆ ಅಬ್ರಾರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ 4 ರನ್ಗಳಿಂದ ಅರ್ಧಶತಕ ವಂಚಿತರಾದರು.
ಕುಲ್ದೀಪ್ ಕಮಾಲ್ : ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ ಕಮಾಲ್ ಮಾಡಿದರು. ಅವರು 9 ಓವರ್ಗಳಲ್ಲಿ 40 ರನ್ ನೀಡಿ 3 ವಿಕೆಟ್ಗಳನ್ನು ಉರುಳಿಸಿದರು. ಆದರೆ ಹ್ಯಾಟ್ರಿಕ್ ಚಾನ್ಸ್ ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡರು.
ಸೆಮಿಫೈನಲ್ಗೆ ಎಂಟ್ರಿ : ಐಸಿಸಿ ಚಾಂಫಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ಗೆ ಎಂಟ್ರಿಕೊಟ್ಟ ಮೊದಲ ತಂಡ ಭಾರತ ಆಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 60 ರನ್ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಗ್ರೂಪ್ ಲೀಗ್ನ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಪಾಕ್ ಸೆಮಿಸ್ ಪ್ರವೇಶ ಡೌಟ್ : ಭಾರತ ಸೆಮಿಫೈನಲ್ಗೆ ಪ್ರವೇಶಿಸಿದರೆ ಮತ್ತೊಂದೆಡೆ ಪಾಕಿಸ್ತಾನದ ಸೆಮಿಸ್ ಬಾಗಿಲು ಬಹುತೇಕ ಮುಚ್ಚಿದೆ. ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ ಸೋಲನ್ನು ಕಂಡಿರುವ ಪಾಕ್ಗೆ ಭಾರೀ ಸಂಕಷ್ಟ ಎದುರಾಗಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ ಪಾಕ್ ಸೆಮಿಸ್ ರೇಸ್ನಿಂದ ಹೊರಬೀಳಲಿದೆ.