Connect with us

ಎಂ.ಪಿ / ಎಮ್.ಎಲ್.ಎ

ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ

Published

on

ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ

ಪಿಲಿಕುಳ ಪುನಶ್ಚೇತನಕ್ಕೆ ಪಿಲಿಕುಳ ಉತ್ಸವ ಆಯೋಜನೆ

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮ

ಮಂಗಳೂರು, ZoomKarnataka, Sep 04 : ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಾಗಿದ್ದು ಜಿಲ್ಲೆಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಪಿಲಿಕುಳದಲ್ಲಿ ಉತ್ಸವವನ್ನು ಆಯೋಜಿಸುವ ಮೂಲಕ ಪಿಲಿಕುಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು ಸೀಮಿತಗೊಂಡಿದ್ದು, ದೇಶದ ಮಹಾನಗರಳಲ್ಲಿ ಇರುವಂತಹ ನೈಟ್ ಲೈಫ್ ಪರಿಕಲ್ಪನೆಯೇ ಇಲ್ಲವಾಗಿದೆ. ಹೀಗಾಗಿ ಇಲ್ಲಿ ಐಟಿ ಬಿಟಿ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಇಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು, ತಿನ್ನುವ ಆಹಾರ, ಧರಿಸುವ ಬಟ್ಟೆಯ ಮೇಲಿನ ನಿರ್ಬಂಧಗಳು ಹೊರ ರಾಜ್ಯ, ದೇಶಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಾ ಇಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಹಬ್ ಆಗಿರುವ ಜಿಲ್ಲೆಯಲ್ಲಿ ಹಿಂದೆಲ್ಲಾ ಹೊರ ರಾಜ್ಯಗಳ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಮೇಲಿನ ಹಂತದ ಶಿಕ್ಷಣಕ್ಕೆ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದವರು ಹೇಳಿದರು.


ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಪಡೆಯುತ್ತಾರೆ. ಆದರೆ 9 ಗಂಟೆಯ ಬಳಿಕ ಐಸ್‌ಕ್ರೀಂ ಪಾರ್ಲರ್‌ಗಳು ಕೂಡಾ ಇಲ್ಲಿ ಬಾಗಿಲು ಮುಚ್ಚುತ್ತವೆ.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಪಾನ್ ಸಂಸ್ಥೆಯು ಈಗಾಗಲೇ ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿದ್ದು, ಈ ದಿಸೆಯಲ್ಲಿ ಕಾಲೇಜಿನಲ್ಲಿ ಜಪಾನ್ ಭಾಷಾ ಕಲಿಕೆಯ ಕೋರ್ಸ್ ಕೂಡಾ ಆರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸರಕಾರಿ ಮಟ್ಟದಲ್ಲಿ ನಡೆಸಲು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಮಂಜುನಾಥ ಭಂಡಾರಿ ಹೇಳಿದರು.


ಗ್ರಾಮ ಪಂಚಾಯತ್‌ಗಳ ಸರಕಾರಿ ಶಾಲೆ, ಪಂಚಾಯತ್ ಕಟ್ಟಡಗಳ ದುರಸ್ತಿ ಸೇರಿದಂತೆ ರಸ್ತೆ ಅಭಿವೃದ್ಧಿ ಹೊರತುಪಡಿಸಿ ಇತರ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಗ್ರಾ.ಪಂ. ಒಂದಕ್ಕೆ ತಲಾ 5 ಲಕ್ಷ ರೂ.ನಂತೆ ಆರು ವರ್ಷಗಳ ಅವಧಿಯಲ್ಲಿ 380 ಪಂಚಾಯತ್‌ಗಳಿಗೆ ಅನುದಾನ ಹಂಚಿಕೆಗೆ ನಿರ್ಧಾರ ಮಾಡಿರುವುದಾಗಿ ಮಂಜುನಾಥ ಭಂಡಾರಿ ಹೇಳಿದರು.
ಜಿಲ್ಲೆಯ ಬೀಚ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಕೂಡಾ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು.

ಪಿಲಿಕುಳದಲ್ಲಿ ಉತ್ಸವ ಆಯೋಜನೆ!
ಪಿಲಿಕುಳದಲ್ಲಿ ಹಿಂದೆ ನಡೆಯುತ್ತಿದ್ದ ಕಂಬಳ ಬಂದ್ ಆಗಿದೆ. ಹೀಗಾಗಿ ಪಿಲಿಕುಳದಲ್ಲಿ ಪಿಲಿಕುಳೋತ್ಸವ ಅಥವಾ ತುಳುನಾಡೋತ್ಸವ ರೀತಿ ಒಂದು ವಾರಗಳ ಕಾಲ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಪ್ರಚಾರ ಮಾಡಲು ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದೇವೆ. ಈಗಾಗಲೇ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಒಂದು ಸಭೆ ನಡೆದಿದ್ದು ಮುಂದೆ ಉತ್ಸವವನ್ನು ಯಾವ ರೀತಿ ನಡೆಸಬಹುದು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯ, ದೇಶ, ವಿದೇಶಗಳ ಜನರು ತುಳುನಾಡಿನ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುವಂತೆ ಕಾರ್ಯಕ್ರಮ ಆಯೋಜನೆ, ಮಕ್ಕಳಿಗಾಗಿ ವಿನೂತನ ಸ್ಪರ್ಧೆ ಮತ್ತು ಕಾರ್ಯಕ್ರಮ ಆಯೋಜನೆ, ತುಳುನಾಡ ಕಂಬಳ ಇತ್ಯಾದಿ ಆಯೋಜಿಸಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದಲ್ಲದೆ ಹೊರಗಿನ ಜನರಿಗೆ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ“ ಎಂದರು.

ಶಾಲೆ ದತ್ತು ಪಡೆದು ಮಾದರಿ ಶಾಲೆಯಾಗಿ ಪರಿವರ್ತನೆ!
“ಕೋಡಿ ಬೆಂಗ್ರೆ ಶಾಲೆ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಅಲ್ಲಿ ಭೇಟಿ ಕೊಟ್ಟು ಶಾಲೆಯನ್ನು ದತ್ತು ಪಡೆದು ನನ್ನ ಸ್ವಂತ ಹಣ ಮಾತ್ರವಲ್ಲದೆ ದಾನಿಗಳ ನೆರವಿನಿಂದ ಸಂಪೂರ್ಣ ಅಭಿವೃದ್ಧಿ ಮಾಡಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲಿ ಮಾದರಿ ಶಾಲೆಯನ್ನಾಗಿ ಪತಿವರ್ತಿಸಲಾಗುವುದು. ಇದೇ ರೀತಿ ಬೆಂಜನಪದವು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು“ ಎಂದರು.

”ಅಡಿಕೆ ಹಾಳೆ ಅಡಿಕೆ ತಟ್ಟೆಗಳು ನಮ್ಮ ಜಿಲ್ಲೆಯಿಂದಲೇ ರಫ್ತ್ತು ಆಗುತ್ತಿದೆ. ಇದನ್ನು ರಾಜ್ಯದೆಲ್ಲೆಡೆ ಪ್ರಚಾರ ಮಾಡುವ ಕೆಲಸ ಆಗಬೇಕು. ಪತ್ರಕರ್ತರ ಸಂಘದ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಬೇಕು“ ಎಂದು ಶಾಸಕರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಕುರಿತ ಪ್ರಶ್ನೆಗೆ ”ಮಂಗಳೂರಿನ ಬದಲು ಪುತ್ತೂರಲ್ಲಿ ಮೆಡಿಕಲ್ ಕಾಲೇಜು ಮಾಡಿ ಉಡುಪಿಯ ಬದಲು ಕುಂದಾಪುರದಲ್ಲಿ ಮಾಡಿ ಎಂದು ನಾನು ಮನವಿಯನ್ನು ಮಾಡಿದ್ದೇನೆ. ಯಾಕೆಂದರೆ ಮೂಲ ಸೌಕರ್ಯಗಳೇ ಇಲ್ಲದ ಕಡೆ ಇದನ್ನು ಮಾಡಿದಲ್ಲಿ ಒಳ್ಳೆಯದು ಎಂದರು.

ಪಿಲಿಕುಳದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡೆದು ಹೋಗಲು ಅವಕಾಶವವಿಲ್ಲ. ಇದಕ್ಕಾಗಿ ಪ್ರತ್ಯೇಕ ಹಣ ಕೊಡಬೇಕು. ದುಬಾರಿ ಶುಲ್ಕ ಕೊಟ್ಟರೂ ಪ್ರವಾಸಿಗರಿಗೆ ಇದು ಹೊರೆಯಾಗಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ಬಗ್ಗೆ ಕೂಡಲೇ ಅಧಿಕಾರಿಗಳ ಜೊತೆಗೆ ಮಾತಾಡಿ ಕ್ರಮ ಜರುಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪಿಲಿಕುಳ ಗುತ್ತಿನ ಮನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾಕಿರುವ ಮರದ ಪೀಠೋಪಕರಣಗಳು ಗೆದ್ದಲು ಹಿಡಿದಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading