Connect with us

ಕರಾವಳಿ

ಬಿಜೆಪಿ ಮಂಗಳೂರು ದಕ್ಷಿಣದ ಅರ್ಥಪೂರ್ಣ ಆಟಿ ಪರ್ಬ:- ಶಾಸಕ ವೇದವ್ಯಾಸ್ ಕಾಮತ್

Published

on

ZoomKarnataka Aug 12/8/2024 ಜಾನಪದ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ತುಳುನಾಡಿನಲ್ಲಿ ಜುಲೈ-ಆಗಸ್ಟ್ ಬಂತೆಂದರೆ ಆಟಿ ಕಳಂಜದ್ದೇ ಸುದ್ದಿ. ಅಂತೆಯೇ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ನಗರದ ಕೆನರಾ ಹೈಸ್ಕೂಲ್ ಉರ್ವ ಬಳಿ ಇರುವ ಸ್ಕೌಟ್ & ಗೈಡ್ ಸಭಾಭವನದಲ್ಲಿ ಆಟಿದ ಪರ್ಬ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆಯಿತು.

ಆಟಿದ ಪರ್ಬ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್ ಹಾಗೂ ಪ್ರಮುಖರು ದೀಪ ಬೆಳಗಿಸುವ ಹಾಗೂ ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಬಾವಿಯಿಂದ ನೀರು ಸೇದುವ ಮೂಲಕ ಉದ್ಘಾಟಿಸಿಲಾಯಿತು.

ಆಟಿದ ಪರ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಂಸದರು ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಆಚರಿಸಲಾಗುತ್ತಿರುವ ತುಳುನಾಡ ಮಣ್ಣಿನ ಸೊಬಗಾದ ಆಟಿದ ಪರ್ಬ ಕಾರ್ಯಕ್ರಮ ಸುಗಮವಾಗಿ ನಡೆಯಲಿ ಎಂದು ಹಾರೈಸಿದರು.

ಆಟಿ ಕಳಂಜದ ವಿಶೇಷತೆ ಹಾಗೂ ಹಿನ್ನೆಲೆಯ ಬಗ್ಗೆ ಮಾತನಾಡಿದ ಮುಖ್ಯ ಅತಿಥಿ ಶ್ರೀ ವಸಂತ್ ಕುಮಾರ್ ಶೆಟ್ಟಿಯವರು, ಆಟಿ ತಿಂಗಳಲ್ಲಿ ಮನೆ ಮನೆಯ ರೋಗ-ರುಜಿನಗಳನ್ನು ಅನಾರೋಗ್ಯವನ್ನು ದೂರ ಮಾಡಲೆಂದೇ ಆಟಿ ಕಳಂಜ ಬರುವನೆಂಬ ನಮ್ಮ ಹಿರಿಯರ ನಂಬಿಕೆ ಯಾವುದೇ ಮೂಢನಂಬಿಕೆಯಲ್ಲ. ಪ್ರತಿಯೊಂದು ಧಾರ್ಮಿಕ ನಂಬಿಕೆಯ ಹಿಂದೆಯೂ ವೈಜ್ಞಾನಿಕ ಹಿನ್ನಲೆ ಇರುವುದೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆ. ಪುರಿ ಜಗನ್ನಾಥನ ರಥೋತ್ಸವವೇ ಇದೇ ಸಮಯದಲ್ಲಿ ನಡೆಯುವುದರಿಂದ ಇಲ್ಲಿ ಅಶುಭ ತಿಂಗಳು ಎನ್ನುವ ಮಾತೇ ಬರುವುದಿಲ್ಲ ಎಂದರು.

ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ, ನಮ್ಮ ಹಿರಿಯರು ಆಟಿಯ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಎಷ್ಟು ಕಷ್ಟ ಪಡುತ್ತಿದ್ದರು, ಆ ಸಮಯದಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸಿಕೊಂಡು ಹೇಗೆ ಬದುಕಿದರು ಎಂಬುದನ್ನು ಅರಿಯುವುದೇ ಈ ಕಾರ್ಯಕ್ರಮದ ಉದ್ದೇಶ. ತುಳುನಾಡ ಪ್ರಾಚೀನ ಸಂಪ್ರದಾಯ, ಆಚಾರ-ವಿಚಾರಗಳನ್ನು ಇಂದಿನ ಯುವ ಜನಾಂಗಕ್ಕೆ ಮಾತ್ರವಲ್ಲದೇ, ಭವಿಷ್ಯದ ಪೀಳಿಗೆಯಲ್ಲಿ ಆಸಕ್ತಿ ಮೂಡಿಸುವ ಆಶಯದೊಂದಿಗೆ ಈ ಕಾರ್ಯಕ್ರಮ ನಡೆಸಲಾಗಿದ್ದು ತುಳು ಭಾಷೆ-ಸಂಪ್ರದಾಯ- ಆಚರಣೆಗಳು ಸದಾ ಕಾಲಕ್ಕೂ ಶಾಶ್ವತವಾಗಿ ಉಳಿಯಲೆಂದು ಆಶಿಸುತ್ತೇನೆ ಎಂದರು.

ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ತುಳುನಾಡಿನ ಜನಪದ ಸಂಸ್ಕೃತಿ, ಕೃಷಿ ಪದ್ಧತಿ, ಕೃಷಿ ಸಲಕರಣೆಗಳ ಅನಾವರಣದ ಚಿತ್ರಣವಿದ್ದು, ಅದು ನಮ್ಮ ಪೂರ್ವಜರು ಎಷ್ಟು ಕಷ್ಟಕರ ಹಾಗೂ ಪರಿಶ್ರಮದಿಂದ ಜೀವನ ಸಾಗಿಸುತ್ತಿದ್ದರು ಎಂಬುದನ್ನು ಬಿಂಬಿಸುತ್ತಿತ್ತು. ಪ್ರಸ್ತುತ ಕಾಲ ಘಟ್ಟದಲ್ಲಿ ಸಕಲ ಸೌಕರ್ಯಗಳಿದ್ದರೂ ಚಡಪಡಿಕೆಯ ಜೀವನ ನಡೆಸುತ್ತಿರುವ ನಾವುಗಳು ಬದುಕಿನ ವಾಸ್ತವವನ್ನು ಅರಿಯಬೇಕಿದೆ.

ತುಳುನಾಡ ಜನಪದ ಕ್ರೀಡೆಗಳಾದ ಕೋಳಿ ಅಂಕ, ತೆಂಗಿನ ಕಾಯಿ ಕಟ್ಟುವುದು, ಮುಂತಾದ ಗ್ರಾಮೀಣ ಸೊಗಡಿನ ಕ್ರೀಡೆಗಳ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಪಾಲಿಕೆ ಸದಸ್ಯೆಯರು, ಕಾರ್ಯಕರ್ತೆಯರು, ಹಾಗೂ ಮಕ್ಕಳು ತುಳುನಾಡಿನ ಗೀತೆಗೆ ಹೆಜ್ಜೆ ಹಾಕಿದರು. ಅಲ್ಲದೇ ಹುಲಿವೇಷ ನೃತ್ಯವು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತುಂಬಿತು.

ಮಧ್ಯಾಹ್ನದ ವೇಳೆಗೆ ತುಳುನಾಡಿನ ಆಹಾರ ಪದ್ಧತಿಯ 108 ಬಗೆ ಬಗೆಯ ತಿನಿಸುಗಳು ಆಟಿದ ಪರ್ಬದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಸಿದ್ದವಾಗಿದ್ದವು. ಕಿಕ್ಕಿರಿದು ಸೇರಿದ್ದ ಜನರು ತುಳುನಾಡಿನ ಪ್ರತಿಯೊಂದು ಆಹಾರವನ್ನು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಸವಿದರು. ಮಧ್ಯಾಹ್ನ ಭೋಜನದ ನಂತರ ವಿವಿಧ ಸ್ಪರ್ಧೆಗಳು ನಡೆದು ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದವು. ಕಾರ್ಯಕ್ರಮದ ಆರಂಭದಿಂದಲೂ “ಆಟಿ ಕಳಂಜನು” ಇಡೀ ಕಾರ್ಯಕ್ರಮದ ಸುತ್ತಲೂ ಸುತ್ತುತ್ತಾ ಮನೆ ಮನೆಯ ಮಾರಿ ನಿವಾರಿಸುವುದನ್ನು ಬಿಂಬಿಸುತ್ತಿದ್ದನು.

ಕಾರ್ಯಕ್ರಮದ ವ್ಯವಸ್ಥಾ ದೃಷ್ಟಿ ಹಾಗೂ ಯಶಸ್ಸಿಗೆ ಮಂಗಳೂರು ನಗರ ದಕ್ಷಿಣ ಮಂಡಲದ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತರು ಹೆಚ್ಚು ಶ್ರಮವಹಿಸಿದ್ದರು.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಮೇಶ್ ಕಂಡೆಟ್ಟು, ಸಂಜಯ್ ಪ್ರಭು, ವಸಂತ ಜೆ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪೂರ್ಣಿಮಾ, ಸತೀಶ್ ಪ್ರಭು, ಮೋನಪ್ಪ ಭಂಡಾರಿ, ನಾಗರಾಜ್ ಶೆಟ್ಟಿ, ರಾಕೇಶ್ ರೈ, ರಮೇಶ್ ಹೆಗ್ಡೆ, ಲಲ್ಲೇಶ್, ಯತೀಶ್ ಅರ್ವರ್, ನಾರಾಯಣ ಗಟ್ಟಿ, ಸೇರಿದಂತೆ ಮಂಡಲದ ಪ್ರಮುಖರು, ಪದಾಧಿಕಾರಿಗಳು, ಪಾಲಿಕೆ ಸದಸ್ಯರುಗಳು, ಹಾಗೂ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading