ಮಂಜೇಶ್ವರ,ನ 06(Zoom Karnataka): “ಭಗವತೀ ಐಶ್ವರ್ಯ ಸಂಪನ್ನೆ. ‘ಭಗ’ ಎಂದರೆ ಐಶ್ವರ್ಯ, ಸಂಪತ್ತು. ಸಂಪತ್ತಿನಿಂದ ಕೂಡಿದವಳು ಭಗವತಿ. ಸಂಪತ್ತು ಇದ್ದರೆ ಭಗವತಿ ಇದ್ದಂತೆ. ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಪರಮಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿ ನುಡಿದರು. ಅವರು ಇಂದು ಬೆಳಗ್ಗೆ ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ ಬೃಹತ್ ನಿಧಿ ಸಮರ್ಪಣಾ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು.
ಭಗದ ಇನ್ನೊಂದು ಅರ್ಥ ಸೂರ್ಯ, ಆದಿತ್ಯ. ಇಂದು ಆದಿತ್ಯವಾರ ಕ್ಷೇತ್ರದಲ್ಲಿ ನಡೆಯುತ್ತಿರುವ ನಿಧಿ ಸಂಚಯನ ಕಾರ್ಯ ಭಗವತೀ ತಾಯಿಯ ಅನುಗ್ರಹದಿಂದ ಐಶ್ವರ್ಯ ಪ್ರದಾಯಕವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು. ಮಲ್ಪೆಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾತನಾಡಿ “ದೇವರು ಪ್ರತಿಯೊಬ್ಬರಿಗೆ ಮನೆ ಕಟ್ಟುವ ಯೋಗ ಕೊಟ್ಟಂತೆ ಭಕ್ತರಿಗೆ ದೇವರ ಮನೆ ಕಟ್ಟುವ ಸುಯೋಗವನ್ನು ಕಲ್ಪಿಸಿದ್ದಾರೆ”. ಕನಿಲ ಕ್ಷೇತ್ರದ ನಿರ್ಮಾಣಕ್ಕೆ ನಾವು ಹತ್ತು ರೂಪಾಯಿ ನೀಡಿದರೆ, 20 ರೂಪಾಯಿ ಮರು ಪಾವತಿಯ ಮೂಲಕ ದೇವರು ನೀಡುವರು, ಯಾಕಂದ್ರೆ ನಾವು ನೀಡಿದ ಕಾಣಿಕೆಗೆ ದೇವರು ಪ್ರತಿಫಲ ನೀಡಲಿರುವರು. ಅದಕ್ಕಾಗಿ ನಾವು ಜೀರ್ಣೋದ್ದಾರ ಕಾರ್ಯಕ್ಕೆ ನಮ್ಮಿಂದಾದ ಕೈಲಾದ ಸಹಾಯವನ್ನೂ ಮಾಡುತ್ತಾ ಕ್ಷೇತ್ರದ ಜೀರ್ಣೋದ್ದಾರಕ್ಕೆ ಸಹಕಾರಿಯಾಗೋಣ ಎಂದು ಅವರು ಹೇಳಿದರು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕಡಪ್ಪರವರು ವಹಿಸಿದ್ದರು.
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಪರಮಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು, ಸಭಾಕರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಶುಭಾಶೀರ್ವಚನ ನೀಡಿದರು.
ಈ ವೇಳೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಕೃಷ್ಣ ಎನ್. ಉಚ್ಚಿಲ್ ರವರು ನಿಧಿ ಸಂಚಯನ ಕಾರ್ಯಕ್ರಮಕ್ಕೆ ಮೊದಲ ಹಂತದ ದೇಣಿಗೆಯಾಗಿ 25 ಲಕ್ಷ ರೂಪಾಯಿ ನೀಡಿದ್ದು, ಮೊತ್ತದ ಚೆಕ್ ನ್ನು ಮಾತೃಶ್ರಿ ಅಮ್ಮಣ್ಣಿ ಅಮ್ಮನವರ ಕೈಯಾರೆ ಜೀರ್ಣೋದ್ಧಾರ ಸಮಿತಿಗೆ ನೀಡಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಬಜಾಲ್ ಕ್ಷೇತ್ರದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಬ್ರಹ್ಮ ಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿ, ಆಧ್ಯಾತ್ಮಿಕ ಚಿಂತಕರಾದ ವಿಜಯ ಗುರೂಜಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದುರು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜನಾರ್ದನ್, ಧಾರ್ಮಿಕ ಮುಂದಾಳುಗಳಾದ ಗಣೇಶ್ ಬಜಾಲ್, ಬಾಬು ಟಿ. ಬಂಗೇರ, ಸುಂದರ ಟಿ. ಬಂಗೇರ, ಪುರುಷೋತ್ತಮ ಪಾವೂರು, ಶ್ರೀಮತಿ ಸಹನಾ ಸುಜಿತ್, ಶ್ರೀಮತಿ ಮೋತಿ ಕಿರಣ್ ಉಪೇಂದ್ರ, ವಾಮನ ಇಡ್ಯ, ಚಂದ್ರಹಾಸ ಉಳ್ಳಾಲ್, ಜಯರಾಮ ಬಲ್ಲಂಗುಡೇಲು, ಸುಕುಮಾರ ಯು. ಉಪ್ಪಳ, ಸದಾಶಿವ ಉಳ್ಳಾಲ, ಶಂಕರ್ ರೈ ಮಾಸ್ಟರ್, ಜಯಂತ ಶೆಟ್ಟಿ ಕನಿಲ ಗುತ್ತು, ಶಿವಪ್ರಸಾದ್ ಕಟ್ಟೆ ಬಜಾರ್, ವಿಶ್ವನಾಥ ಪೊಯ್ಯಕಂಡ, ಗಣೇಶ್ .ಯು, ಕಿಶೋರ್ ಶೆಟ್ಟಿ ಬಂದ್ಯೊಡ್ ಮುದುಕುಂಜಗುತ್ತು, ಲೋಕೇಶ್ ಬೋಳಾರ್ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಪ್ರಾರಂಭದಲ್ಲಿ ಕನಿಲ ಶ್ರೀ ಭಗವತಿ ಕ್ಷೇತ್ರದ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಸ್ವಾಗತಿಸಿ, ಧಾರ್ಮಿಕ ಮುಂದಾಳು ದಿನಕರ್ ಬಿ.ಎಂ ಹೊಸಂಗಡಿ, ಹರೀಶ್ ಶೆಟ್ಟಿ ಮಾಡ ಕಾರ್ಯಕ್ರಮ ನಿರೂಪಿಸಿ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಲಕ್ಷ್ಮಣ್.ಟಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಚತುರ್ವರ್ಣಸ್ತರು, ನಾಲ್ಕೂರೈಯ ಗುರಿಕಾರರು, ಆಚಾರಪಟ್ಟವರು, ಕ್ಷೇತ್ರದ ಭರಣ ಸಮಿತಿ, ಭಗವತೀ ಸೇವಾ ಸಂಘ ಮುಂಬೈ, ಮಹಿಳಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಊರಿನ ಭಕ್ತರು ಭಾಗವಹಿಸಿದ್ದರು.
ಬೆಳಗ್ಗೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿಗಳ ಮಹಾ ಗಣಯಾಗ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಸುಮಾರು ಎಂಟು ಕೋಟಿಗೂ ಅಧಿಕ ನಿಧಿಯ ಅವಶ್ಯಕತೆ ಇದ್ದು ಭಕ್ತಾದಿಗಳು ತುಂಬು ಹೃದಯದಿಂದ ಸಹಕರಿಸಬೇಕಾಗಿ ಜೀರ್ಣೋದ್ದಾರ ಸಮಿತಿ ವಿನಂತಿಸಿಕೊಂಡಿದೆ.