ಮಂಗಳೂರು, ಅ 09(Zoom Karnataka): ಈ ಬಾರಿಯ ಕುದ್ರೋಳಿ ದಸರಾ ಮೆರವಣಿಗೆಯಲ್ಲಿ ತುಳುನಾಡಿನ ದೈವ ದೇವರಗಳನ್ನು ಅವಹೇಳನ ಮಾಡುವ ಸ್ತಬ್ಧ ಚಿತ್ರಗಳಿಗೆ ಅವಕಾಶ ಇಲ್ಲ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.ಮಂಗಳೂರು ದಸರಾ ಮಹೋತ್ಸವ ಸಿದ್ಧತೆ ಹಾಗೂ ಸಂಘ-ಸಂಸ್ಥೆಗಳಿಗೆ ಜವಾಬ್ದಾರಿ ಹಂಚಿಕೆಗಾಗಿ ಕುದ್ರೋಳಿಯಲ್ಲಿ ಭಾನುವಾರ ಸ್ವಯಂಸೇವಕರು ಮತ್ತು ಸಂಘ ಸಂಸ್ಥೆಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.
ಸಾಮರಸ್ಯದ ದಸರಾದಲ್ಲಿ ಪಾಲ್ಗೊಳ್ಳಲು ಹೊಸ ಸಂಘ ಸಂಸ್ಥೆಗಳು ಆಸಕ್ತಿ ವಹಿಸಿವೆ. ದಸರಾ ಮೆರವಣಿಗೆ ಅಕ್ಟೋಬರ್ 24ರಂದು ಸಂಜೆ 4ಕ್ಕೆ ಆರಂಭವಾಗಲಿದೆ. ಮೆರವಣಿಗೆಯ ಟ್ಯಾಬ್ಲೊಗಳಲ್ಲಿ ಯಾವುದೇ ಜಾತಿ, ಮತ, ಸಮುದಾಯ, ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ನಾಸಿಕ್ ಬ್ಯಾಂಡ್ ತಂಡಗಳು ಈ ಬಾರಿ ಪೊಲೀಸ್ ಇಲಾಖೆಯಿಂದ ವಿಶೇಷ ಅನುಮತಿ ಪಡೆಯಬೇಕು ಎಂದು ಸೂಚನೆ ಬಂದಿದ್ದು, ಇದನ್ನು ಎಲ್ಲರೂ ಪಾಲಿಸಬೇಕು, ಕನ್ನಡ ಸಂಸ್ಕೃತಿ ಇಲಾಖೆಯ ಕಲಾತಂಡಗಳಿಗೂ ಸೂಕ್ತ ವ್ಯವಸ್ಥೆ ಮಾಡಿಕೊಡುವ ಜವಾಬ್ದಾರಿಯಿದ್ದು, ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.