ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ದೇಶದ ಅತಿ ದೊಡ್ಡ ಮೋಸದ ಸಂಸ್ಥೆಯಾಗಿದ್ದು, ಗೋಶಾಲೆಯಿಂದ ಗೋವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದೆ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಧಾರ್ಮಿಕ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಶ್ವದ ಅತ್ಯಂತ ಪ್ರಭಾವಿ ಕೃಷ್ಣ ಪಂಥವಾದ ಇಸ್ಕಾನ್ ಸಂಸ್ಥೆಯು ಮನೇಕಾ ಗಾಂಧಿ ಅವರ ಆರೋಪಗಳನ್ನು ಸುಳ್ಳು ಎಂದು ತಿರಸ್ಕರಿಸಿತು.
ಮಾಜಿ ಕೇಂದ್ರ ಸಚಿವೆ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯಾಗಿರುವ ಮನೇಕಾ ಗಾಂಧಿ ಅವರು ಪ್ರಾಣಿಗಳ ಕಲ್ಯಾಣದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿಯೆತ್ತಿದ್ದಾರೆ.
”ಇಸ್ಕಾನ್ ದೇಶದ ಅತಿದೊಡ್ಡ ಮೋಸದ ಸಂಸ್ಥೆ. ಇದು ಗೋಶಾಲೆಗಳನ್ನು ನಿರ್ವಹಿಸುತ್ತದೆ ಮತ್ತು ವಿಶಾಲವಾದ ಜಮೀನುಗಳನ್ನು ಒಳಗೊಂಡಂತೆ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುತ್ತದೆ” ಎಂದು ಅವರು ವಿಡಿಯೋದಲ್ಲಿ ಹೇಳಿರುವುದು ವೈರಲ್ ಆಗಿದೆ.
ನಂತರ ಅವರು ಆಂಧ್ರಪ್ರದೇಶದ ಇಸ್ಕಾನ್ನ ಅನಂತಪುರ ಗೋಶಾಲಾಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ, ಅಲ್ಲಿ ಅವರು ಹಾಲು ಅಥವಾ ಕರುಗಳನ್ನು ನೀಡದ ಯಾವುದೇ ಹಸುವನ್ನು ಕಾಣಿಸಲಿಲ್ಲ ಎಂದು ಹೇಳುತ್ತಾರೆ. “ಇಡೀ ಡೈರಿಯಲ್ಲಿ ಗೊಡ್ಡು ಹಸು ಇರಲಿಲ್ಲ. ಒಂದು ಕರುವೂ ಇರಲಿಲ್ಲ. ಅಂದರೆ ಎಲ್ಲಾ ಮಾರಾಟ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
(ಗೊಡ್ಡು ಹಸು ಎಂದರೆ ಸ್ವಲ್ಪ ಸಮಯದಿಂದ ಹಾಲು ನೀಡದಿರುವುದು)
”ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರುತ್ತಿದೆ. ಅವರು ರಸ್ತೆಗಳಲ್ಲಿ ‘ಹರೇ ರಾಮ್ ಹರೇ ಕೃಷ್ಣ’ ಎಂದು ಹಾಡುತ್ತಾರೆ. ನಂತರ ಅವರು ತಮ್ಮ ಇಡೀ ಜೀವನ ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ಬಹುಶಃ ಅವರಷ್ಟು ಜಾನುವಾರುಗಳನ್ನು ಯಾರೂ ಕಟುಕರಿಗೆ ಮಾರಾಟ ಮಾಡಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಆರೋಪಗಳನ್ನು ತಿರಸ್ಕರಿಸಿದ ಇಸ್ಕಾನ್ನ ರಾಷ್ಟ್ರೀಯ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್, ”ಈ ಧಾರ್ಮಿಕ ಸಂಸ್ಥೆಯು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಗೋವು ಮತ್ತು ಗೂಳಿ ರಕ್ಷಣೆ ಮತ್ತು ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಹೋರಿಗಳ ಸೇವೆ ಮಾಡುತ್ತದೆ ವಿನಃ ಅವರ ಆರೋಪದಂತೆ ಕಟುಕರಿಗೆ ಮಾರಾಟ ಮಾಡುವುದಿಲ್ಲ” ಎಂದು ಅವರು ಹೇಳಿದರು.
ದನದ ಮಾಂಸವು ಪ್ರಧಾನ ಆಹಾರವಾಗಿರುವ ಪ್ರಪಂಚದ ಹಲವು ಭಾಗಗಳಲ್ಲಿ ಇಸ್ಕಾನ್ ಗೋಸಂರಕ್ಷಣೆಗೆ ಮುಂದಾಗಿದೆ. ಮನೇಕ ಗಾಂಧಿ ಅವರು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಇಸ್ಕಾನ್ನ ಹಿತೈಷಿಗಳು ಆದ್ದರಿಂದ ಅವರ ಈ ಹೇಳಿಕೆಗಳಿಂದ ನಮಗೆ ಆಶ್ಚರ್ಯವಾಗಿದೆ” ಎಂದು ಇಸ್ಕಾನ್ ಹೇಳಿಕೆಯಲ್ಲಿ ತಿಳಿಸಿದೆ.