ತಿರುವೈಲು ದ.ಕ.ಜಿ.ಪಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆಯಲ್ಲಿ ೩ ನೂತನ ತರಗತಿ ಕೊಠಡಿ ಉದ್ಘಾಟನೆ ಮತ್ತು ಶಾಲೆಯನ್ನು ಹೈಸ್ಕೂಲ್ ಮಟ್ಟಕ್ಕೇರಿಸಲು ಪ್ರಯತ್ನಿಸುವೆ : ಡಾ. ಭರತ್ ಶೆಟ್ಟಿ ಭರವಸೆ
ಗುರುಪುರ ಸ.11(Zoom Karnataka): ಕಳೆದ ಆರು ವರ್ಷಗಳ ಅವಧಿಯಲ್ಲಿ ಶಾಸಕನಾಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ತಿರುವೈಲು ಶಾಲೆಗೆ ಸರ್ಕಾರದ `ವಿವೇಕ’ ಯೋಜನೆಯಡಿ ಎರಡು ತರಗತಿ ಕೊಠಡಿ ಒದಗಿಸಿ ಕೊಟ್ಟಿದ್ದೇನೆ. ಇಲ್ಲಿ ವಿದ್ಯಾರ್ಥಿಗಳ ಕೊರತೆ ಇಲ್ಲ. ಶಾಲೆಯು ಹೈಸ್ಕೂಲ್ ಆಗಿ ಮಾರ್ಪಾಡಾಗಬೇಕು ಎನ್ನುವ ಸ್ಥಳೀಯರ ಬೇಡಿಕೆ ಪೂರೈಸಲು ಪ್ರಯತ್ನಿಸುತ್ತೇನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ವಾಮಂಜೂರು ಮನಪಾ ತಿರುವೈಲು 20ನೇ ವಾರ್ಡ್ನ ದ.ಕ.ಜಿ.ಪಂ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಮೂರು ನೂತನ ತರಗತಿ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಹೇಮಲತಾ ಸಾಲ್ಯಾನ್ ಮತ್ತು ಅವರ ಪತಿ, ಉದ್ಯಮಿ ರಘು ಸಾಲ್ಯಾನ್ ಅವರನ್ನು ಶಾಲೆಯ ಪರವಾಗಿ ಶಾಸಕರು ಶಾಲು ಹೊದಿಸಿ, ಹೂಗುಚ್ಛ ನೀಡಿ ಸನ್ಮಾನಿಸಿದರು.