ಕರಾವಳಿ ಜು 19(Zoom Karnataka):ಅಂಗನವಾಡಿಗೆ ಬರುವ ಮಕ್ಕಳು ಬಡವರದ್ದು ಅಂತಲೋ ಏನೋ, ರಾಜ್ಯ ಸರ್ಕಾರ ಅಂಗನವಾಡಿ ವ್ಯವಸ್ಥೆ ಬಗ್ಗೆ ತಾತ್ಸಾರ ಮಾಡುತ್ತಿದೆ. ಮೊನ್ನೆ ಹಾಸನದಲ್ಲಿ ಕೊಳೆತ ಮೊಟ್ಟೆ ಬೆಳಕಿಗೆ ಬಂದ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್ ಹಾಕ್ತೀವಿ ಎಂದು ಅಬ್ಬರಿಸಿದ್ದರು. ಆದರೆ ಈಗ ಕರಾವಳಿ ಭಾಗಕ್ಕೂ ಕೊಳೆತ ಮೊಟ್ಟೆಗಳು ಪೂರೈಕೆಯಾಗಿದ್ದು, ಮಕ್ಕಳ ಪೋಷಕರ ಆಕ್ರೋಶಕ್ಕೆ ಅಂಗನವಾಡಿ ಶಿಕ್ಷಕಿಯರು ಹೈರಾಣಾಗಿದ್ದಾರೆ.
ಮೊನ್ನೆಯಷ್ಟೇ ಹಾಸನದಲ್ಲಿ ಬೆಳಕಿಗೆ ಬಂದಿದ್ದ ಕೊಳೆತ ಮೊಟ್ಟೆ ಪ್ರಕರಣ ಈಗ ಕರಾವಳಿ ಭಾಗದ ಅಂಗನವಾಡಿಗಳಲ್ಲೂ ಕಾಣಿಸಿಕೊಂಡಿದೆ. ಮಂಗಳೂರು ನಗರ ಭಾಗದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡಿರುವ ಮೊಟ್ಟೆಗಳೆಲ್ಲ ಕೊಳೆತು ನಾರತೊಡಗಿದ್ದು, ಪೋಷಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ವಾರದ ಹಿಂದೆ ಹಾಸನ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೊಳೆತ ಮೊಟ್ಟೆ ಕಾಣಿಸಿಕೊಂಡ ಬೆನ್ನಲ್ಲೇ ಇದರ ಜವಾಬ್ದಾರಿ ಹೊತ್ತ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೊಳೆತ ಮೊಟ್ಟೆ ಪೂರೈಸಿದ್ದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಹಾಕ್ತೀವಿ ಅಂತ ಅಬ್ಬರಿಸಿದ್ದರು. ಆದರೆ ಸಚಿವರ ಮಾತು ಹೊರಬಿದ್ದ ಬಳಿಕವೂ ಮಂಗಳೂರಿನ ಹಲವೆಡೆ ಕೊಳೆತ ಮೊಟ್ಟೆಗಳು ಪೂರೈಕೆಯಾಗಿದ್ದು, ಪೋಷಕರು, ಗರ್ಭಿಣಿ ಮಹಿಳೆಯರ ಕುಟುಂಬಸ್ಥರು ಅಂಗನವಾಡಿ ಕಾರ್ಯಕರ್ತೆರಿಗೆ ಬೈಗುಳ ನೀಡಿದ್ದಾರೆ.
ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರು ಮತ್ತು ಸಣ್ಣ ಮಕ್ಕಳಿಗೆ ಸರ್ಕಾರದಿಂದ ಮೊಟ್ಟೆ ಪೂರೈಕೆ ಮಾಡಲಾಗುತ್ತೆ. ಹಾಗಾಗಿ ಪ್ರತಿ ತಿಂಗಳು ಅಂಗನವಾಡಿಗೆ ಮೊಟ್ಟೆ ಬಂದ ಕೂಡಲೇ ತಮ್ಮ ವ್ಯಾಪ್ತಿಯ ಗರ್ಭಿಣಿಯರ ಕುಟುಂಬಗಳಿಗೆ ಕಾರ್ಯಕರ್ತೆಯರು ಮೊಟ್ಟೆಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಮೊಟ್ಟೆಯನ್ನು ಮನೆಗೊಯ್ದು ಬೇಯಿಸಿದರೆ, ಒಳಗಡೆ ಕಪ್ಪಾಗಿದ್ದಲ್ಲದೆ, ಕೆಲವು ಮೊಟ್ಟೆಗಳು ಕೊಳೆತು ಹುಳ ಬಂದಿರುವುದು ಪತ್ತೆಯಾಗಿದೆ. ಹೀಗಾಗಿ ಬಾಣಂತಿಯರು, ಗರ್ಭಿಣಿಯರ ಮನೆಯವರು ಬಂದು ಶಿಕ್ಷಕಿಯರನ್ನು ಟಾರ್ಗೆಟ್ ಮಾಡಿದ್ದಾರೆ.
ವಿಜಯಪುರ ಮೂಲದ ಗುತ್ತಿ ಬಸವೇಶ್ವರ ಮ್ಯಾನ್ ಪವರ್ ಏಜನ್ಸೀಸ್, ತಾಳಿಕೋಟೆ ಎಂಬ ಹೆಸರಿನ ಕಂಪನಿಯವರು ಮಂಗಳೂರಿನಲ್ಲಿ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಸಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಅಂಗನವಾಡಿ ಶಿಕ್ಷಕಿಯರು ತಿಳಿಸಿದ್ದರೂ ಕ್ಯಾರೆಂದಿಲ್ಲ. ಜೂನ್ ತಿಂಗಳಲ್ಲಿ ಮೊಟ್ಟೆ ಪೂರೈಕೆ ಆಗಿರಲಿಲ್ಲ. ಈ ಬಾರಿ ಜುಲೈ 11ರಂದು ಮೊಟ್ಟೆ ಪೂರೈಸಿದ್ದು ಪೂರ್ತಿಯಾಗಿ ಹಾಳಾಗಿ ಹೋಗಿದೆ. ಹಳೆಯ ಮೊಟ್ಟೆಗಳನ್ನೇ ಸಂಗ್ರಹಿಸಿಟ್ಟು ಪೂರೈಕೆ ಮಾಡಿರುವ ಶಂಕೆಯಿದೆ. ಇದಲ್ಲದೆ, ಮೊಟ್ಟೆಗಳನ್ನು ತಂದಿದ್ದ ಲಾರಿಯವರು ಅಂಗನವಾಡಿ ಆಸುಪಾಸಿನ ಮನೆಗಳಿಗೂ ಕಡಿಮೆ ದರದಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡಿದ್ದರು. ಕೊಳೆತಿರುವ ವಿಷಯ ತಿಳಿದೇ ಮೊಟ್ಟೆಗಳನ್ನು ನೀಡಿದ್ದರು ಎನ್ನಲಾಗುತ್ತಿದೆ.ಒಟ್ಟಿನಲ್ಲಿ ಬಡವರ ಮಕ್ಕಳು ಮಾತ್ರ ಬರುವ ಅಂಗನವಾಡಿಗಳಿಗೆ ಕೊಳೆತು ನಾರುತ್ತಿರುವ ಮೊಟ್ಟೆಗಳನ್ನು ಪೂರೈಕೆ ಮಾಡಿರುವುದು ಪೋಷಕರ ಆಕ್ರೋಶ ಸರ್ಕಾರದ ವಿರುದ್ಧ ತಿರುಗುವಂತಾಗಿದೆ