ಮಂಗಳೂರು ಜೂ29(Zoom Karnataka): ರಾಜ್ಯದಲ್ಲಿ ರಾಜಕೀಯ ಕಲಿಯಲು ಶೀಘ್ರದಲ್ಲೇ ಪೊಲಿಟಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆರಂಭಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ ಡಿಗ್ರಿ ಕಲಿತ ಯುವಕರಿಗೆ ಯಾವುದಾದರೂ ರಾಜಕೀಯ ಕ್ಷೇತ್ರದಲ್ಲಿ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಯಾವ ರೀತಿ ಎಂದು ತಿಳಿದುಕೊಳ್ಳಲು ರಾಜ್ಯದಲ್ಲಿ ಪೊಲಿಟಿಕಲ್ ಟ್ರೈನಿಂಗ್ ಸೆಂಟರ್ ಇಲ್ಲ. ಡಾಕ್ಟರ್ ಆಗಲು ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಆಗಲು ಇಂಜಿನಿಯರಿಂಗ್ ಕಾಲೇಜು ಇರುತ್ತದೆ. ಆದರೆ ರಾಜಕೀಯವಾಗಿ, ಸರ್ಕಾರಿ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡುವುದು ಎಂಬುದಕ್ಕೆ ಕರ್ನಾಟಕದಲ್ಲಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಇಲ್ಲ. ಹಾಗಾಗಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಾಡುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ಇದು ಡಿಗ್ರಿ ಆದವರಿಗೆ ಒಂದು ವರ್ಷದ ಟ್ರೈನಿಂಗ್, 6 ತಿಂಗಳು ಪ್ರಾಕ್ಟಿಕಲ್, 6 ತಿಂಗಳು ಟ್ರೈನಿಂಗ್ ಇರುತ್ತದೆ. ಈ ಬಗ್ಗೆ ರೂಪುರೇಷೆ ಚರ್ಚೆ ಮಾಡಿದ್ದೇವೆ. ಒಂದು ಹಂತಕ್ಕೆ ಬಂದಿದೆ. ಸರ್ಕಾರ ಮತ್ತು ವಿಧಾನಪರಿಷತ್ ಸಭಾಪತಿ ಜೊತೆಗೆ ಮಾತನಾಡಿ ಪೊಲಿಟಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಕರ್ನಾಟಕ ಮಾಡುವ ಚಿಂತನೆ ಇದ್ದು, ಮುಂದೆ ಇದಕ್ಕೆ ಚಾಲನೆ ಕೊಡುತ್ತೇವೆ ಎಂದರು.
ಸ್ಕೂಲ್ ಆಫ್ ಗವರ್ನಮೆಂಟ್ ಎಂದು ಪುಣೆಯಲ್ಲಿ ಒಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್ ಇದೆ. ಅವರಲ್ಲಿ ಚರ್ಚೆ ಮಾಡಿಕೊಂಡು ಒಂದು ವರ್ಷದ ಟ್ರೈನಿಂಗ್ ಮಾಡಲಾಗುತ್ತದೆ. ಇದರಲ್ಲಿ ಜಿಂದಾಬಾದ್, ಮುರ್ದಾಬಾದ್ ಹೊರತುಪಡಿಸಿ ಎಲ್ಲಾ ವಿಚಾರಗಳು ಇರುತ್ತವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ರಾಜಕೀಯಕ್ಕೆ ಬರುವ ಅವಕಾಶ ಇದೆ. ಟ್ರೈನಿಂಗ್ ಇನ್ಸ್ಟಿಟ್ಯೂಟ್ ಕೇವಲ ಶಾಸಕ, ಸಂಸದನಾಗಲು ಮಾತ್ರ ಅಲ್ಲ. ಸರ್ಕಾರಿ ಸಂಸ್ಥೆ ಕೆಲಸ, ಸಾಮಾಜಿಕ ಕೆಲಸ ಮಾಡುವುದು, ಶಾಸಕರ ಆಪ್ತ ಸಹಾಯಕನಾಗಿ ಕೆಲಸ ಮಾಡುವುದು, ಗ್ರಾ.ಪಂ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯನಾಗುವುದು ಮೊದಲಾದವುಗಳಿಗೆ ಈ ಟ್ರೈನಿಂಗ್ ಇನ್ಸ್ಟಿಟ್ಯೂಟ್ ತರಬೇತಿ ನೀಡಲಿದೆ. ಕೇವಲ ಜನಪ್ರತಿನಿಧಿ ಆಗುವುದು ಮಾತ್ರವಲ್ಲ ಸರಕಾರದ ಕೆಲಸ ಮಾಡುವುದು ಮಾಡಬಹುದು. ಪ್ರತಿಯೊಬ್ಬರಿಗೂ ಒಂದೊಂದು ಆಸಕ್ತಿ ಇರುತ್ತದೆ. ಎಷ್ಟೇ ಕಷ್ಟ ಇದ್ದರೂ ಆತ ಅದರ ಕೆಲಸ ಮಾಡುತ್ತಾನೆ. ಅಂತಹವರಿಗೆ ಇದೊಂದು ಅವಕಾಶ ಎಂದರು.
ಈ ರಾಜ್ಯದ ಎಲ್ಲಾ ಜನರಿಗೆ ಸೂಕ್ತವಾದ ಜಾಗದಲ್ಲಿ ಇದನ್ನು ಆರಂಭಿಸಲಾಗುವುದು. ಇದರಲ್ಲಿ ವಿಷಯಗಳಿದ್ದು, ಪೂರ್ಣಾವಧಿ ಉಪನ್ಯಾಸಕರಿರುತ್ತಾರೆ. ಆಗಿಂದಾಗ್ಗೆ ರಾಜಕಾರಣಿಗಳು, ಮುತ್ಸದ್ಧಿಗಳನ್ನು ಕರೆಯಬಹುದು. ಇಂಟರ್ನಿಯಾಗಿ ಯಾವ ಶಾಸಕರ ಜೊತೆಗೆ ಕೆಲಸ ಮಾಡಬಹುದು. ಇದರಿಂದಾಗಿ ಶಾಸಕರಿಗೆ ಕೆಲಸಕ್ಕೆ ಜನ ಸಿಗುತ್ತಾರೆ. ಅವರಿಗೆ ಉಚಿತ ಟ್ರೈನಿಂಗ್ ಸಿಗುತ್ತದೆ ಎಂದು ಸ್ಪೀಕರ್ ಹೇಳಿದರು.
ಮೊದಲ ಬಾರಿ ಶಾಸಕರಾದವರಿಗೆ ಟ್ರೈನಿಂಗ್ ಮಾಡಲಾಗಿದೆ. ನಾನು ಮೊದಲ ಬಾರಿ ಶಾಸಕನಾದಾಗ ನನಗೆ ಹೇಗೆ ಪ್ರಶ್ನೆ ಕೇಳಬೇಕು, ಸದನದಲ್ಲಿ ಯಾವ ರೀತಿ ಪ್ರಶ್ನೆ ಕೇಳಬೇಕು ಎಂದು ಯಾರೂ ಹೇಳಿಲ್ಲ. ನನ್ನ ಸ್ವ ಇಚ್ಛೆಯಿಂದ ಧ್ರುವನಾರಾಯಣ ಅವರಲ್ಲಿ ಕಲಿತುಕೊಂಡೆ. ಈ ರೀತಿ ತರಬೇತಿ ಕೊಟ್ಟರೆ ಮೊದಲ ಬಾರಿಗೆ ಶಾಸಕರಾದವರು ಆಸಕ್ತಿಯಿಂದ, ಆತ್ಮವಿಶ್ವಾಸದಿಂದ ಭಾಗವಹಿಸಲು ಸಾಧ್ಯವಾಗಲಿದೆ. ಬಹಳಷ್ಟು ಶಾಸಕರು ಭಾಗಿಯಾಗಿದ್ದಾರೆ. ಅವರು ಉತ್ಸಾಹದಲ್ಲಿದ್ದು, ಇದರ ಫಲಿತಾಂಶ ಅಧಿವೇಶನದಲ್ಲಿ ಗೊತ್ತಾಗಲಿದೆ ಎಂದರು.
ಟ್ರೈನಿಂಗ್ ಪಡೆದವರು ಚೆನ್ನಾಗಿ ಅಧಿವೇಶನದಲ್ಲಿ ಭಾಗವಹಿಸಿದವರೆ ಅವರಿಗೆ ಹೈದರಾಬಾದ್, ದೆಹಲಿಯಲ್ಲಿ ದೊಡ್ಡದಾಗಿ ತರಬೇತಿ ನೀಡಲಾಗುವುದು. ನಮಗೆ ಉತ್ತಮ ನಾಯಕರು ಸೃಷ್ಟಿಯಾಗಬೇಕು. ಜುಲೈ 3 ಅಧಿವೇಶನ ಆರಂಭವಾಗಲಿದೆ. ಜುಲೈ 3 ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 14 ತಾರೀಕಿನವರೆಗೆ ಅಧಿವೇಶನ ನಡೆಯಲಿದ್ದು, 7 ನೇ ತಾರೀಕಿಗೆ ಬಜೆಟ್ ಮಂಡನೆ ಆಗಲಿದೆ ಎಂದು ತಿಳಿಸಿದರು