ಬೆಂಗಳೂರು,ಜೂ29(Zoom Karnataka):ರಾಜ್ಯ ಕಮಲ ಪಾಳಯದಲ್ಲಿ ಬದಲಾವಣೆಯ ಗಾಳಿ ಬೀಸ್ತಿದೆ. ಸೋತ ಬಳಿಕ ಬಿಜೆಪಿ ರಾಜ್ಯಧ್ಯಕ್ಷರ ಬದಲಾವಣೆಯ ಕೂಗು ಭುಗಿಲೆದ್ದಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ ನೀಡಬೇಕೆಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಇದೆಲ್ಲರದರ ಜೊತೆಗೆ ಕಮಲ ಪಾಳಯದಲ್ಲಿ ಆಂತರಿಕ ಕಲಹವೂ ಸ್ಫೋಟಗೊಂಡಿದೆ. ಶಾಸಕ ಯತ್ನಾಳ್ ವಿರುದ್ಧ ಮತ್ತೆ ಮುರುಗೇಶ್ ಮುಗಿ ಬಿದ್ದಿದ್ದಾರೆ.
ಸೋತು ಸುಣ್ಣವಾದ ಬಿಜೆಪಿಯಲ್ಲಿ ಆಂತರಿಕ ಕಲಹ ಸ್ಫೋಟ
ಖುದ್ದು ಕಮಲ ನಾಯಕರ ನಡುವೆಯೇ ವಾಕ್ಸಮರ ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಮಲ ನಾಯಕರ ಮಧ್ಯೆ ಪೈಪೋಟಿ ಶುರುವಾಗಿದೆ. ಒಬ್ಬರ ಮೇಲೊಬ್ಬರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವಲ್ ಹಾಕ್ತಿದ್ದಾರೆ. ಮಾಜಿ ಸಚಿವ ವಿ. ಸೋಮಣ್ಣ.. ಸಂಸದ ರಮೇಶ್ ಜಿಗಜಿಣಗಿ ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವಲ್ ಹಾಕಿದ್ದಾರೆ. ನಮಗೇ ಸಾರಥಿ ಪಟ್ಟ ಬೇಕು ಅಂತಾ ಬಹಿರಂಗವಾಗಿಯೇ ಪಟ್ಟು ಹಿಡಿದಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಎಂ.ಪಿ ರೇಣುಕಾಚಾರ್ಯ ಖುದ್ದು ಕಟೀಲ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರೋ ರೇಣುಕಾಚಾರ್ಯ, ಕಟೀಲ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ರಾಜ್ಯ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ನೇತೃತ್ವದಲ್ಲಿ ನಡೆದ ಚುನಾವನೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಶಿಸ್ತುಕ್ರಮ ಅಂದರೆ ಏನು? ಕಳೆದ 15 ದಿನಗಳಿಂದ ಒಳ ಒಪ್ಪಂದ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಗ ಯಾಕೆ ರಾಜ್ಯಾಧ್ಯಕ್ಷರು ಮಾತನಾಡಲಿಲ್ಲ
ಎಂಪಿ ರೇಣುಕಚಾರ್ಯ, ಮಾಜಿ ಸಚಿವ
ಇಷ್ಟಕ್ಕೆ ಸುಮ್ಮನಾಗದ ರೇಣುಕಾಚಾರ್ಯ, ಬಿಜೆಪಿ ಸೋತಿರೋದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಸಿಎಂ ಆಗಿದ್ದಾಗ ಬೊಮ್ಮಾಯಿವರನ್ನ ಗುಮಾಸ್ತನ ರೀತಿಯಲ್ಲಿ ನಡೆಸಿಕೊಂಡರು. ಯಡಿಯೂರಪ್ಪರ ಕಣ್ಣೀರಲ್ಲಿ ಬಿಜೆಪಿ ಕೊಚ್ಚಿ ಹೋಯ್ತು. ಈಶ್ವರಪ್ಪ, ಜಗದೀಶ್ ಶೆಟ್ಟರ್ರನ್ನ ಕಡೆಗಣಿಸಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದಕ್ಕೆ ಸೋಲಬೇಕಾಯ್ತು ಅಂತಾ ಹೈಕಮಾಂಡ್ ನಿರ್ಧಾರದ ವಿರುದ್ಧವೇ ಕಿಡಿಕಾರಿದ್ದಾರೆ.
ಯತ್ನಾಳ್-ನಿರಾಣಿ ಮಧ್ಯೆ ಜೋರಾಯ್ತು ಟಾಕ್ ಫೈಟ್
ದಿನೇ ದಿನೇ ಶಾಸಕ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ನಡುವೆ ಟಾಕ್ ಫೈಟ್ ಜೋರಾಗಿದೆ. ಚುನಾಚಣೆಯಲ್ಲಿ ಬೊಮ್ಮಾಯಿಯನ್ನ ಸೋಲಿಸ್ತೀವಿ ಅಂತಾ ಯತ್ನಾಳ್ ಬ್ಲ್ಯಾಕ್ಮೇಲ್ ಮಾಡಿದ್ರು ಅಂತಾ ಮುರುಗೇಶ್ ನಿರಾಣಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಯತ್ನಾಳ್ ಎಲ್ಲರಿಗೂ ಟೋಪಿ ಹಾಕೋ ಕೆಲಸ ಮಾಡಿದ್ದಾರೆ ಅಂತಾ ನಿರಾಣಿ ಕಿಡಿಕಾರಿದ್ದಾರೆ.
ಹಿಂದಿನ ಮುಖ್ಯಮಂತ್ರಿ (ಬೊಮ್ಮಾಯಿ)ಗೆ ಯತ್ನಾಳ್ ಬ್ಲ್ಯಾಕ್ಮೇಲ್ ಮಾಡುವ ತಂತ್ರವನ್ನು ಮಾಡಿಕೊಂಡು ಬಂದಿದ್ದಾರೆ.
ಶಿಗ್ಗಾವಿಯಲ್ಲಿ ನಮ್ಮ ಸಮಾಜದ ಮತಗಳು ತುಂಬಾ ಇದೆ. ನಾವು ಮನಸ್ಸು ಮಾಡಿದ್ರೆ ನಿಮ್ಮನ್ನು ಸೋಲಿಸ್ತೀವಿ ಎಂದು ನೇರವಾಗಿ ಹೇಳಿದ್ದರು. ಇದು ಬ್ಲ್ಯಾಕ್ ಮೇಲ್ ಕುತಂತ್ರ. ಇಲ್ಲಿ ಏನೇನ್ ಮಾಡಿದ್ದಾರೆ, ಅದೆಲ್ಲ ಟೋಪಿ ಹಾಕಿ ಮಾಡಿರೋದು.
ಮುರುಗೇಶ್ ನಿರಾಣಿ, ಮಾಜಿ ಸಚಿವ
ಅದೇನೆ ಇರಲಿ.. ಹೀನಾಯವಾಗಿ ಸೋತ ಬಳಿಕ ರಾಜ್ಯ ಬಿಜೆಪಿಯಲ್ಲಿ ಒಳ ಜಗಳ ಜೋರಾಗಿದೆ. ಕಮಲ ನಾಯಕರ ನಡುವೇ ಆರೋಪ, ಪ್ರತ್ಯಾರೋಪಗಳು ಕೇಳಿ ಬರ್ತಿವೆ. ಈ ಎಲ್ಲದರ ಮಧ್ಯೆ ಕೇಸರಿ ಸೇನೆಗೆ ನೂತನ ಸಾರಥಿಯಾಗಲು ಭಾರೀ ಲಾಬಿ ಶುರುವಾಗಿದೆ. ಕಮಲ ಕೋಟೆಯಲ್ಲಿ ಸ್ಪೋಟಗೊಂಡ ಈ ಆಂತರಿಕ ಕಲಹ ಮುಂದೆ ಇನ್ನು ಯಾವ ಹಂತಕ್ಕೆ ಹೋಗುತ್ತೋ ಅನ್ನೋದೆ ಸದ್ಯದ ಕುತೂಹಲ.