ಮಂಗಳೂರು, ಜೂ23(Zoom Karnataka) ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬಡವರಿಗೆ ಅನುಕೂಲವಾಗುವಂತೆ ಡೀಮ್ಡ್ ಫಾರೆಸ್ಟ್ ನಿಯಮಗಳನ್ನು ಸಡಿಲಿಸಿ. ಅಧಿಕಾರಿಗಳು ಮನಸ್ಸು ಮಾಡಿದರೆ ಇದು ಸಾಧ್ಯ. ಅಧಿಕಾರಿಗಳು ಬಡವರ ಮೇಲೆ ಗಮನ ಹರಿಸಬೇಕು. ನಿಯಮ ಸಡಿಲಿಕೆಗೆ ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ನೀಡುತ್ತದೆ’ ಎಂದರು.
ಪಶುಪಾಲನಾ ಇಲಾಖೆ ಅಧಿಕಾರಿಗೆ ಖಾದರ್ ಕ್ಲಾಸ್ ಸ್ಪೀಕರ್ ಯು.ಟಿ.ಖಾದರ್ ಅವರು ಪಶುಪಾಲನಾ ಇಲಾಖೆ ಅಧಿಕಾರಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡರು. ಇಲಾಖೆಯ ಹಣಕಾಸು ಲೆಕ್ಕಾಚಾರದ ಬಗ್ಗೆ ಖಾದರ್ ಲೆಕ್ಕ ಕೇಳಿದಾಗ ತಡವರಿಸಿದ ಅಧಿಕಾರಿಯನ್ನು ಕಂಡು ಕುಪಿತರಾದ ಅವರು, ‘ಪಶು ಸಂಜೀವಿನಿ ಆಂಬ್ಯುಲೆನ್ಸ್ ಇದ್ದರೂ ಕೂಡ ಯಾಕೆ ಚಾಲಕನನ್ನು ನೇಮಿಸಿಲ್ಲ. ಪ್ರತಿ ಗೋವಿಗೆ ಸರ್ಕಾರದಿಂದ ಎಷ್ಟು ಹಣ ಬರುತ್ತದೆ. ಇದ್ಯಾವುದಕ್ಕೂ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ನಿಮ್ಮಲ್ಲಿ ಉತ್ತರವಿಲ್ಲವೇ ಎಂದು ಗುಡುಗಿದರು.
ಇಲ್ಲಿ ನಿಮ್ಮನ್ನು ಕೇಳಲು ಜನ ಇಲ್ಲ. ಎಲ್ಲಾ ವ್ಯವಸ್ಥೆ ಸರಿಯಾಗಿದೆಯಾ?, ಆಂಬ್ಯುಲೆನ್ಸ್ ಏಜೆನ್ಸಿಯವನು ಗಾಡಿ ಹೇಗೆ ಓಡಿಸುತ್ತಾನೆ ಎಂದು ನೀವು ಗಮನಿಸುತ್ತೀರಾ? ಅಥವಾ ಸುಮ್ಮನೆ ಬಿಲ್ ಕೊಡುತ್ತಿದ್ದೀರಾ? ಇದೆಲ್ಲದರ ಬಗ್ಗೆಯೂ ಉಸ್ತುವಾರಿ ಸಚಿವರಿಗೆ ಲೆಕ್ಕ ಕೊಡಬೇಕು. ಮನುಷ್ಯನಿಗೆ ಹೇಗೆ ಬದುಕುವ ಹಕ್ಕಿದೆಯೋ ಹಾಗೆಯೇ ಪ್ರಾಣಿಗಳಿಗೂ ಇದೆ ಎಂದರು.
ಶಿಷ್ಟಾಚಾರ ಉಲ್ಲಂಘನೆ ಸಿಡಿದ ಬಿಜೆಪಿ ಶಾಸಕರು ಹಾಲಿ ಶಾಸಕರು ಇರುವಾಗಲೇ ಮಾಜಿ ಶಾಸಕರು ಸಭೆ ಉದ್ಘಾಟಿಸಿದ ಬಗ್ಗೆ ಉಸ್ತುವಾರಿ ಸಚಿವರ ವಿರುದ್ಧ ಬಿಜೆಪಿ ಶಾಸಕರು ಆಕ್ರೋಶಿತರಾದರು. ಬಳಿಕ ಮಾತನಾಡಿದ ಶಾಸಕರಾದ ಹರೀಶ್ ಪೂಂಜ ಹಾಗೂ ವೇದವ್ಯಾಸ ಕಾಮತ್, ‘ಸಭೆಗಳಿಗೆ ನಮ್ಮನ್ನು ಕರೆಯದೆ ಇನ್ಯಾರನ್ನೋ ಕರೆಯುತ್ತಾರೆ. ಹೀಗೆ ಆದರೆ ನಾವೂ ಕೂಡ ನಮಗೆ ಬೇಕಾದವರನ್ನು ತಂದು ಕೂರಿಸುತ್ತೇವೆ’ ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.